ಹಾಸನದಲ್ಲಿ ಜಾತ್ಯಾತೀತ ಜನತಾ ದಳ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಶಾಸಕ ಪ್ರೀತಮ್ ಗೌಡ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಒಬ್ಬ ಭಾಜಪ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಆಡಿಯೋವೊಂದರಲ್ಲಿ ಪ್ರೀತಮ್ ಗೌಡ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡರ ಆರೋಗ್ಯದ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿದ್ದಕ್ಕೆ ಜಾದಳ ಕಾರ್ಯಕರ್ತರು ಕುಪಿತಗೊಂಡು ಕಲ್ಲು ತೂರಾಟ ನಡೆಸಿದರೆಂದು ಕೆಲ ಮೂಲಗಳು ತಿಳಿಸಿವೆ. ಪ್ರೀತಮ್ ಗೌಡ ಅವರು ಈ ಧ್ವನಿ ತಮ್ಮದಲ್ಲ ಎಂದು ಹೇಳಿದ್ದಾರೆ.
ಆಡಿಯೋದಲ್ಲಿ, “ಜಾದಳ ಅಧ್ಯಕ್ಷ ಎಚ್ ಡಿ ದೇವೇಗೌಡರು ಬೇಗ ವಿಧಿವಶರಾಗುತ್ತಾರೆ, ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ಸರಿಯಾಗಿಲ್ಲ, ಮತ್ತು ಜಾದಳ ಇತಿಹಾಸದಲ್ಲಿ ಲೀನವಾಗುತ್ತದೆ” ಎಂದು ಪ್ರೀತಮ್ ಗೌಡ ಅವರದು ಎನ್ನಲಾದ ಧ್ವನಿಯು ಸಂತೋಷ್ ಎಂಬ ಹೆಸರಿನ ವ್ಯಕ್ತಿಗೆ ತಿಳಿಸುತ್ತದೆ.
ಈ ಘಟನೆಗೆ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, “ಮೈಸೂರು ಐಜಿ ಮತ್ತು ಹಾಸನದ ಎಸ್‌ಪಿ ಈ ವಿಷಯದ ಬಗ್ಗೆ ನನಗೆ ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ದೇವೇಗೌಡರ ಅನುಯಾಯಿಗಳು ಅವರ ಬಗೆಗಿನ ಹೇಳಿಕೆಯ ವಿರುದ್ಧ ಪ್ರತಿಭಟಿಸುತ್ತಿದ್ದರು. ಕೆಲ ಭಾಜಪ ಕಾರ್ಯಕರ್ತರು ಈ ಗುಂಪನ್ನು ಕೆಣಕಿದರು. ಇದರ ಪರಿಣಾಮವಾಗಿ ಘಟನೆ ನಡೆಯಿತು. ನಾನು ಪೊಲೀಸರಿಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಹೇಳಿದ್ದೇನೆ ” ಎಂದರು.
ಚಿತ್ರ ಕೃಪೆ: Preetham J Gowda (@Preetham_BJP) | Twitter
