ನೀವು ಕೆಲಸದ ದಿನಗಳಂದು ಕಡಿಮೆ ನಿದ್ರಿಸಿ, ವಾರಾಂತ್ಯಗಳಂದು ಹೆಚ್ಚು ನಿದ್ರಿಸುವ ಪ್ರವೃತ್ತಿ ಇಟ್ಟುಕೊಂಡಿದ್ದೀರಾ? ಹಾಗಾದರೆ, ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ಅನುಕೂಲಗಳಿರುವುದಿಲ್ಲ. ಜೊತೆಗೆ, ನಿಮ್ಮ ಆರೋಗ್ಯಕ್ಕೆ ಮಾರಕವಾಗಲೂ ಬಹುದು. ಹೀಗೆಂದು ಹಿರಿಯ ತಜ್ಞ ಕೆನ್ನೆತ್ ರೈಟ್ ಅಭಿಪ್ರಾಯಪಟ್ಟಿದ್ದಾರೆ.
ಎರಡು ದಿನ (ಉದಾಹರಣೆಗೆ, ಶನಿವಾರ-ರವಿವಾರ) ರಜೆಯಿದ್ದು, ಇವೆರಡು ದಿನ ಗಡದ್ದಾಗಿ ನಿದ್ರಿಸುವವರಿಗೆ ದೈಹಿಕವಾಗಿ ಅಲ್ಪಮಟ್ಟಿಗೆ ಚೇತರಿಕೆ ತರಬಹುದು. ಆದರೆ ಇದು ಅಲ್ಪಕಾಲಿಕ. ಮತ್ತೆ ಸೋಮವಾರದಿಂದ ಶುಕ್ರವಾರದ ತನಕ ಮತ್ತೆ ಕಡಿಮೆ ನಿದ್ರೆಯ ಪ್ರವೃತ್ತಿ ಅನುಸರಿಸುವ ಜನರು ಬಹಳಷ್ಟಿದ್ದಾರೆ.
ಸಂಶೋಧಕರು ೧೮ ಇಂದ ೩೯ ವರ್ಷ ವಯಸ್ಸಿನ ಶ್ರೇಣಿಯಲ್ಲಿರುವ ೩೬ ಮಂದಿ ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಎರಡು ವಾರ ಪ್ರಯೋಗಾಲಯದಲ್ಲಿ ತಂಗಲು ಸೂಚಿಸಿದರು. ಅವರ ಆಹಾರ ಪದ್ಧತಿ, ಅವರ ಮೇಲೆ ಬೆಳಕಿನ ಪ್ರಭಾವ ಹಾಗೂ ಅವರ ನಿದ್ರೆಯ ಪ್ರವೃತ್ತಿ – ಇವೆಲ್ಲವನ್ನೂ ಗಹನವಾಗಿ ಗಮನಿಸಲಾಯಿತು.
ಪ್ರಾಥಮಿಕ ಪ್ರಯೋಗದ ನಂತರ, ಸದಸ್ಯರನ್ನು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಒಂದು ಗುಂಪಿಗೆ ಬಹಳ ಹೊತ್ತು ನಿದ್ರಿಸಲು ಅವಕಾಸ ಕಲ್ಪಿಸಲಾಯಿತು. ಪ್ರತಿ ರಾತ್ರಿ ೯ ತಾಸುಗಳ ನಿದ್ರೆ, ಈ ರೀತಿ ೯ ರಾತ್ರಿಗಳ ನಿದ್ರೆ, ಎರಡನೆಯ ಗುಂಪಿನ ಸದಸ್ಯರಿಗೆ ಪ್ರತಿ ರಾತ್ರಿ ೫ ತಾಸುಗಳಂತೆ ೯ ರಾತ್ರಿಗಳ ನಿದ್ರೆ, ಮುರನೆಯ ಗುಂಪಿನ ಸದಸ್ಯ್ರರಿಗೆ ೫ ರಾತ್ರಿಗಳು ೫ ತಾಸುಗಳ ನಿದ್ರೆ, ನಂತರ ಎರಡು ದಿನ ಎಷ್ಟು ಹೊತ್ತು ಬೇಕಾದರೂ ನಿದ್ರಿಸಲು ಸ್ವಾತಂತ್ರ್ಯ ನೀಡಲಾಯಿತು; ನಂತರ ಎರಡು ರಾತ್ರಿಗಳ ಕಡಿಮೆ ನಿದ್ರೆ.
ಈ ಅಧ್ಯಯನ ಸಮಯದಲ್ಲಿ, ಕಡಿಮೆ ನಿದ್ರೆ ಮಾಡಿದಂತ ಗುಂಪುಗಳು ರಾತ್ರಿಯ ವೇಳೆ ಕುರುಕುಲು ತಿಂಡಿ ಹೆಚ್ಚಿನ ಪ್ರಮಾಣದಲ್ಲಿ ತಿಂದು ಮೈ ತೂಕ ಹೆಚ್ಚಿಸಿಕೊಂಡರು. ಅವರ ಶರೀರಗಳಲ್ಲಿ ಇನ್ಸುಲಿನ್ ಸಂವೇದನೆ ಕಡಿಮೆಯಾಗುತ್ತಾ ಬಂದಿತು. ವಾರಾಂತ್ಯದಲ್ಲಿ ಹೆಚ್ಚು ನಿದ್ರೆ ಮಾಡಿದ ಗುಂಪಿನ ಸದಸ್ಯರಲ್ಲಿ ಅಲ್ಪ ಪ್ರಮಾಣದ ಸುಧಾರಣೆ ಕಂಡುಬಂದಿತು (ರಾತ್ರಿಯ ಹೊತ್ತು ಕುರುಕಲು ತಿಂಡಿ ತಿನ್ನುವುದು ಕಡಿಮೆ ಮಾಡಿದ್ದರು) ಅದರೆ ವಾರದ ದಿನಗಳಲ್ಲಿ ರಾತ್ರಿ ಕಡಿಮೆ ನಿದ್ರಿಸಿದ ಕಾರಣ ಕುರುಕಲು ತಿಂಡಿ ಹೆಚ್ಚು ತಿನ್ನುತ್ತಿದ್ದರು.
ಕಡೆಗೆ, ವಾರಾಂತ್ಯಗಳಲ್ಲಿ ಹೆಚ್ಚು ಹೊತ್ತು ನಿದ್ರಿಸುವವರಲ್ಲಿ ಯಾವುದೇ ಚಯಾಪಚಯ ಕ್ರಿಯೆಯಲ್ಲಿ ಯಾವುದೇ ಸುಧಾರಣೆಗಳು ಕಂಡುಬರಲಿಲ್ಲ.ಎಂದು ಸಹ-ಸಂಶೋಧಕ ಕ್ರಿಸ್ ಡೆಪ್ನರ್ ಹೇಳಿದರು.
Journal of Current Biology ಪತ್ರಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಯಿತು.
