ಕನ್ನಡ

ರಾಜ್ಯದಲ್ಲೇ ಸರ್ವೋತ್ತಮ ಆಗುವತ್ತ ಶಿವಮೊಗ್ಗದ ನೆಹರೂ ಕ್ರೀಡಾಂಗಣ

ಶಿವಮೊಗ್ಗದಲ್ಲಿರುವ ನೆಹರೂ ಕ್ರೀಡಾಂಗಣವು ವಾಯುವಿಹಾರಿಗಳು ಮತ್ತು ಕ್ರೀಡಾಪ್ರಿಯರಿಗೆ ನೆಚ್ಚಿನ ತಾಣ. ಇತ್ತೀಚೆಗೆ ೨೪.೮೫ ಕೋಟಿ ರೂಪಾಯಿ ವೆಚ್ಚದಲ್ಲಿ ಆತ್ಯಾಧುನೀಕರಣಗೊಳ್ಳುತ್ತಿದೆ. ಇದು ಸಂಪೂರ್ಣವಾದೊಡನೆ, ರಾಜ್ಯದಲ್ಲೇ ಅತ್ಯುತ್ತಮ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಡೆಯಲಿದೆ.

ಈ ಕ್ರೀಡಾಂಗಣವು ೧೯೭೭ರಲ್ಲಿ ನಿರ್ಮಾಣವಾಯಿತು. ಅಂದಿನಿಂದಲೂ ಇದು ಜಿಲ್ಲೆಯ ಜನರ ನಿತ್ಯಜೀವನದ ಒಂದು ಭಾಗವಾಗಿ ಮುಂದುವರೆದುಕೊಂಡು ಬರುತ್ತಿದೆ. ಮೊದಲ ಮೂರು ದಶಕಗಳಲ್ಲಿ ಇದು ಕೇವಲ ಮಣ್ಣಿನ ಮೈದಾನವಾಗಿತ್ತು. ೨೦೧೦ರಲ್ಲಿ ಮೊದಲ ಬಾರಿಗೆ ಇದರಲ್ಲಿ ಸಿಂಥಟಿಕ್ ಟ್ರ್ಯಾಕ್ ಸ್ಥಾಪಿಸಲಾಯಿತು. ಎರಡು ವರ್ಷಗಳ ಹಿಂದೆ, ಸುಮಾರು ೪೨ ಲಕ್ಷ್ರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಯಿತು.

ಕೇಂದ್ರ ಸರ್ಕಾರದ “ಸ್ಮಾರ್ಟ್ ಸಿಟಿ ಯೋಜನೆ” ಪಟ್ಟಿಯಲ್ಲಿ ಶಿವಮೊಗ್ಗ ಸ್ಥಾನ ಗಿಟ್ಟಿಸಿಕೊಂಡದ್ದು ಈ ಕ್ರೀಡಾಂಗಣದ ಪಾಲಿಗೆ ವರವಾಗಿದೆ. ಮೊದಲಿಗೆ, ೪.೮೫ ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣದ ಸುತ್ತಲೂ ತಡೆಗೋಡೆ, ಛಾವಣಿ, ಸ್ಥಳಾಂತರಿಸಬಹುದಾದ ವಾಲಿಬಾಲ್ ಮೈದಾನ, ಮೆಟ್ಟಿಲುಗಳ ಮೇಲಿನ ಛಾವಣಿ, ಕ್ರೀಡಾಂಗಣದ ಸುತ್ತಲೂ ಹೈ ಮಾಸ್ಟ್ ದೀಪಗಳು, ೧೦ ಅಡಿ ವಿಸ್ತಾರದ ಕಾಲ್ನಡಿಗೆ ಪಥ, ೧೦೦X೧೦೦ ಅಡಿ ಅಳತೆ ಜಾಗದಲ್ಲಿ ಅತ್ಯಾಧುನಿಕ ಜಿಮ್‌, ಕಬಡ್ಡಿ, ಟೇಕ್ವಾಂಡೊ ಅಂಕಣಗಳನ್ನು ಸಿದ್ದಧಪಡಿಸಲಾಗುತ್ತಿದೆ. ಹಲವು ಭಾಗಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇವೆಲ್ಲಾ ಕಾಮಗಾರಿಗಳನ್ನು ಸ್ಮಾರ್ಟ್‌ ಸಿಟಿ ಯೊಜನೆಯಡಿ ನಿರ್ವಹಿಸಲಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತದೆ.

ಹಿಂದೆ ಈ ಮೈದಾನವನ್ನು ಹೆಚ್ಚಾಗಿ ಕ್ರೀಡೇತರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು, ಕ್ರೀಡೆ ಮೂಲೆಗುಂಪಾಗುತ್ತಿತ್ತು. ಕ್ರೀಡೇತರ ಚಟುವಟಿಕೆಗಳಿಂದಾಗಿ ಅಲ್ಲಿ ಅಸ್ವಚ್ಛತಾ ಸಮಸ್ಯೆಗಳು ಹಾಗೂ ಅಲ್ಲಿನ ಆಟದ ಅಂಕಣ ಮತ್ತು ಸ್ವತ್ತುಗಳಿಗೆ ಹಾನಿಯಾದ ವರದಿಗಳು ಬರತೊಡಗಿದವು. ಇದರ ಪರಿಣಾಮವಾಗಿ, ಶಿವಮೊಗ್ಗದ ಸಾರ್ವಜನಿಕರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿ ಈ ಕ್ರೀಡಾಂಗಣವನ್ನು ಕ್ರೀಡಾ ಚಟುವಟಿಕೆಗಳಿಗಾಗಿ ಮಾತ್ರ ಉಪಯೋಗಿಸಬೇಕು ಎಂದು ಆದೇಶ ಹೊರಡಿಸುವಂತೆ ಮಾಡಿತು. ಇದರ ಫಲವಾಗಿ ಕ್ರೀಡಾಂಗಣವು ಏಳ್ಗೆ ಕಾಣಲು ಸಾಧ್ವವಾಗಿದೆ.

 

ಸಿಬಿನ್ ಪನಯಿಲ್ ಸೊಮನ್

ಇಂಡ್‌ಸಮಾಚಾರ್, ಸಾಗರ

Click to comment

Leave a Reply

Your e-mail address will not be published. Required fields are marked *

three − one =

To Top
WhatsApp WhatsApp us