ಪಾಕಿಸ್ತಾನ-ಅಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫರಾಬಾದ್ ಹಾಗೂ ಪಿಒಕೆಯ ಇತರೆ ಭಾಗಗಳಲ್ಲಿ ಕಾಶ್ಮೀರಿ ಯುವಕರು ಪಾಕಿಸ್ತಾನ ಸೇನೆ ಮತ್ತು ಗೂಢಚಾರ ವಿಭಾಗ ಐಎಸ್‌ಐ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದಿರುವುದು ವರದಿಯಾಗಿದೆ.
ಪಾಕಿಸ್ತಾನ ಸೇನೆಯಿಂದ ಅಲ್ಲಿನ ರಾಜಕೀಯ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳಿಗೆ ಹಿಂಸೆ, ಅಪಹರಣ ಹಾಗೂ ದಬ್ಬಾಳಿಕೆಯ ಕೃತ್ಯಗಳ ವಿರುದ್ಧ ಜಮ್ಮು ಕಾಶ್ಮೀರ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಜೆಕೆಎನ್‌ಎಸ್‌ಎಫ್) ಆಯೋಜಿಸಿದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಲಕ್ಷಾಂತರ ಜನರು ಭಾಗವಹಿದರು.
“ಯೆ ಜೊ ದಹಶತ್‌ಗರ್ದೀ ಹೈ, ಉಸಕೆ ಪೀಛೆ ವರದೀ ಹೈ” (ಭಯೋತ್ಪಾದನೆಯ ಹಿಂದೆ ಪಾಕಿಸ್ತಾನದ ಸೇನೆ ಇದೆ) ಎಂದು ಪ್ರತಿಭಟನಾಕಾರರು ಕೂಗಿದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೆಲ ದಿನಗಳ ಹಿಂದೆ ಮುಜಫರಾಬಾದಿನಲ್ಲಿ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಧಾಳಿ ನಡೆಸಿದ ಘಟನೆಯನ್ನೂ ಸಹ ಪ್ರತಿಭಟನಾಕಾರರು ಖಂಡಿಸಿದರು.
ಪಿಒಕೆ ವಲಯವು ಹಿಂದಿನ ಜಮ್ಮು ಮತ್ತು ಕಾಶ್ಮೀರ ಸಾಮ್ರಾಜ್ಯದ ಅಂಗವಾಗಿತ್ತು. ೧೯೪೭ರಲ್ಲಿ ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ವಲಯಗಳನ್ನು ಪಾಕಿಸ್ತಾನವು ಅಕ್ರಮಿಸಿಕೊಂಡಿದೆ. ಆಗಿಂದಲೂ ಇಲ್ಲಿನ ಜನತೆಯು ನಾನಾ ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ.
ಬಡತನ, ನಿರುದ್ಯೋಗ, ಮುಲಭೂತ ಸೌಲಭ್ಯಗಳ ಕೊರತೆ ಸೇರಿ ಹಲವಾರು ಸಮಸ್ಯೆಗಳು ಇಲ್ಲಿ ಕಾಡುತ್ತಿವೆ. ಇಲ್ಲಿನ ಜನರು ತಮ್ಮ ಹಕ್ಕುಗಳಿಗಾಗಿ ಬೇಡಿಕೆ ಇಟ್ಟರೆ ಇವರ ವಿರುದ್ಧ ಪಾಕಿಸ್ತಾನದ ಪೊಲೀಸರು ಮತ್ತು ಸೈನಿಕರು ರಾಕ್ಷಸರಂತೆ ವರ್ತಿಸುತ್ತಾರೆ.
