ಮಾಜಿ ವಿದೇಶಾಂಗ ವ್ಯವಹಾರ ಖಾತೆ ಕಾರ್ಯದರ್ಶಿ ಶ್ಯಾಮ್ ಸರಣ್ ಹೇಳುವ ಪ್ರಕಾರ, ಭಾರತದಾದ್ಯಂತ ಜನರ ಮನದಲ್ಲಿರುವ ಒಟ್ಟಾರೆ ಅಭಿಪ್ರಾಯವನ್ನು ಪರಿಗಣಿಸಿದರೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಇದು ಸೂಕ್ತ ಸಮಯವಲ್ಲ.
ಎರಡೂ ದೇಶಗಳ ನಡುವೆ ಶಾಂತಿಗಾಗಿ ಮಾರ್ಗ ಹುಡುಕಲು ಅಗತ್ಯವಿದೆ. ಆದರೆ ಇದು ಸೂಕ್ತ ಸಮಯವಲ್ಲ. ಪುಲ್ವಾಮಾದಲ್ಲಿ ನಡೆದ ಪಾಕಿಸ್ತಾನಿ ಭಯೋತ್ಪಾದಕ ಕೃತ್ಯವು ಪಾಕಿಸ್ತಾನದ ಬಗ್ಗೆ ಭಾರತದಾದ್ಯಂತ ಅಭಿಪ್ರಾಯವನ್ನೇ ಬದಲಿಸಿಬಿಟ್ಟಿದೆ ಎಂದು ಶ್ಯಾಮ್ ಸರಣ್ ಹೇಳಿದರು.
ಪಾಕಿಸ್ತಾನವನ್ನು ವಿಶ್ವ ವೇದಿಕೆಯಲ್ಲಿ ಏಕಾಂಗಿಯಾಗಿಸುವತ್ತ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿದ ಸರಣ್, ಅವರು ಕ್ರಮಗಳ ಸರಣಿಯನ್ನೇ ಕೈಗೊಂಡಿದ್ದಾರೆ. ಅದೇನು ಮಾಡಲು ಅಗತ್ಯವಿದೆಯೋ ಮೋದಿಯವರು ಅದನ್ನೇ ಮಾಡುತ್ತಿದ್ದಾರೆ. ರಾಜತಾಂತ್ರಿಕವಾಗಿ ಅಂತರರಾಷ್ಟ್ರೀಯ ಅಭಿಪ್ರಾಯವನ್ನು ಪಾಕಿಸ್ತಾನದ ವಿರುದ್ಧ ತಿರುಗಿಸುವಲ್ಲಿ ಮೋದಿಯವರ ಯತ್ನ ಸಮರ್ಪಕವಾಗಿದೆ ಎಂದು ಹೇಳಿದರು.
ಫೆಬ್ರುವರಿ ತಿಂಗಳ ೧೪ರಂದು ಪುಲ್ವಾಮಾದಲ್ಲಿ ನಡೆದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನ ಆತ್ಮಾಹುತಿ ಧಾಳಿಯಲ್ಲಿ ೪೦ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾದದ್ದನ್ನು ಇಲ್ಲಿ ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದಲ್ಲಿದ್ದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿತು.
