ಹದಿನಾರನೆಯ ಲೋಕಸಭೆಯ ಕಟ್ಟಕಡೆಯ ಅಧಿವೇಶನ ಬುಧವಾರ ಅಂತ್ಯಗೊಂಡಿತು. ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.
ಬಹುಮತದ ಸರ್ಕಾರವಿದ್ದರಿಂದ ಭಾರತವು ವಿಶ್ವದ ಗಮನ ಮತ್ತು ಗೌರವ ಸಂಪಾದಿಸಲು ಸಾಧ್ಯವಾಯಿತು; ಭಾರತದ ಆತ್ಮವಿಶ್ವಾಸ ಎಂದಿಗಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು.
ರಫೇಲ್ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗಳನ್ನು ಪ್ರಧಾನಿ ಖಂಡಿಸಿ, “ಸದನದಲ್ಲಿ ಹಲವಾರು ವಿಮಾನಗಳನ್ನು ಹಾರಿಸಲಾಯಿತು” ಎಂದರು. (ರಫೇಲ್ ವಿಚಾರ ಗಮನಕ್ಕೆ ತರಲು ಕಾಂಗ್ರೆಸ್ ಪಕ್ಷದವರು ಲೋಕಸಭೆಯಲ್ಲಿ ಕಾಗದದ ವಿಮಾನಗಳನ್ನು ಮಾಡಿ ಹಾರಿಸಿದ್ದರು)
ಅಧ್ಯಕ್ಷೆ ಸುಮಿತ್ರಾ ಮಹಾಜನ್ ತಮ್ಮ ಭಾಷಣದಲ್ಲಿ, ತಾವು ಸದನವನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರಯತ್ನಿಸಿ, ಎಲ್ಲಾ ಸಂಸದರಿಗೂ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಿದ್ದಾಗಿ ಹೇಳಿದರು.
ರಾಜ್ಯ ಸಭಾ ಅಧಿವೇಶನವೂ ಸಹ ಬುಧವಾರ ಅಂತ್ಯಗೊಂಡಿತು. ತಮ್ಮ ಭಾಷಣದಲ್ಲಿ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಸದಸ್ಯರು ಸದನದಲ್ಲಿ ಪದೇ ಪದೇ ಗದ್ದಲವೆಬ್ಬಿಸಿದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದನದ ಒಟ್ಟಾರೆ ಉತ್ಪಾದಕತೆ ತಮಗೆ ತೃಪ್ತಿ ತಂದಿಲ್ಲ ಎಂದು ಹೇಳಿದರು. ಸದನದಲ್ಲಿ ತಗ್ಗುತ್ತಿರುವ ಉತ್ಪಾದಕತೆಯ ಬಗ್ಗೆ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಾಯ್ಡು ಅವರು ಕಿವಿಮಾತು ಹೇಳಿದರು.
