ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕೊಟ್ಟೂರು ರಥೋತ್ಸವವು ಮಹಾ ಶಿವರಾತ್ರಿ ವ್ರತಕ್ಕೆ ಮುಂಚೆ ನಡೆಯುತ್ತದೆ. ಲಕ್ಷಾಂತರ ಭಕ್ತರು ನಾಡು ಹಾಗೂ ನಾಡಿನಾಚೆಯಿಂದ ಇಲ್ಲಿಗೆ ಬಂದು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಇಂದಿನ ಕೊಟ್ಟೂರು ಎಂಬ ಸ್ಥಳವು ಮುಂಚೆ ಶಿಕಪುರ ಎಂದಿತ್ತು. ಇಲ್ಲಿ ವಾಸಿಸುತ್ತಿರುವವರು ನಾನಾ ರೀತಿಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಶಿವನು ತನ್ನ ವಾಹನ ನಂದಿಗೆ ಆದೇಶಿಸಿದನು.
ನಂದಿಯು ಒಬ್ಬ ಸಾಧುವಿನ ಅವತಾರದಲ್ಲಿ ಈ ಸ್ಥಳಕ್ಕೆ ಬಂದನು. ಅಲ್ಲಿರುವ ಸ್ಥಳೀಯರು ಮೊದಲಿಗೆ ಅವನ ಅಶೌಚ ರೂಪವನ್ನು ನೋಡಿ ಅಸಹ್ಯ ಪಟ್ಟು ವಾಗ್ಧಾಳಿ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಈ ಸಾಧುವನ್ನು ಬಯ್ಯುವವರು ಕಣ್ಣು ದೃಷ್ಟಿ ಕಳೆದುಕೊಂಡರು. ತಮ್ಮ ತಪ್ಪಿನ ಅರಿವಾಗಿ, ಅವರೆಲ್ಲರೂ ಈ ಸಾಧುವಿನ ಬಳಿ ಬಂದು ಕ್ಷಮೆ ಕೇಳಿದರು. ಸಾಧುವು ಅವರನ್ನು ಹರಸಿದೊಡನೆ ಅವರೆಲ್ಲರಿಗೂ ಕಣ್ಣುದೃಷ್ಟಿ ಮರಳಿಬಂದಿತು.
ಇನ್ನೊಮ್ಮೆ, ತನ್ನ ಎಮ್ಮೆ ಸತ್ತುಹೋಯಿತು ಎಂದು ಬಾಲಕನೊಬ್ಬ ಈ ಸಾಧುವಿನಲ್ಲಿ ಅಳಲು ತೋಡಿಕೊಂಡನು. ಸಾಧುವು ಕೂಡಲೇ ಆ ಎಮ್ಮೆಯ ತಲೆಯನ್ನು ಕೆಲ ಕ್ಷಣ ಮುಟ್ಟಿದೊಡನೆ ಎಮ್ಮೆಗೆ ಜೀವ ಮರಳಿ ಬಂದಿತು.
ಸಾಧುವಿನಲ್ಲಿ ಈ ರೀತಿಯ ಶಕ್ತಿಯಿದೆ ಎಂಬ ವಿಷಯವು ಶಿಕಪುರ ಮತ್ತು ಸುತ್ತಮುತ್ತಲ ಸ್ಥಳಗಳ ಜನರಿಗೆ ಗೊತ್ತಾಯಿತು. ಅವರಲ್ಲಿ ಅನೇಕರು ಈ ಸಾಧುವಿನ ಬಳಿ ಬಂದು ತಮ್ಮ-ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅತನ ಮಾರ್ಗದರ್ಶನ ಪಡೆದು ಪರಿಹಾರ ಕಂಡುಕೊಂಡರು. ಜನರು ಸಾಧುವನ್ನು ಹೃತ್ಪೂರ್ವಕವಾಗಿ ಗೌರವಿಸಲಾರಂಭಿಸಿದರು. ಆತನಿಗೆ “ಶ್ರೀ ಗುರು ಕೊಟ್ಟೂರೇಶ್ವರ” ಎನ್ನಲಾರಂಭಿಸಿದರು (“ಕೊಟ್ಟು = ಅಗತ್ಯವಿದ್ದದ್ದನ್ನು ಕೊಡುವುದ; ಈಶ್ವರ = ಶಿವ).
ಶ್ರೀ ಗುರು ಕೊಟ್ಟೂರೇಶ್ವರನ ಗೌರವಾರ್ಥವಾಗಿ ಕೊಟ್ಟೂರೇಶ್ವರ ರಥೋತ್ಸವ ಆಚರಿಸಲಾಗುತ್ತದೆ. ಇದು ಮಹಾಶಿವರಾತ್ರಿ ವ್ರತಕ್ಕೆ ಮುಂಚೆ ನಡೆಯಲಿದೆ. ಹೊಸದಾಗಿ ಕರು ಹಾಕಿರುವ ಹಸು ಅಥವಾ ಎಮ್ಮೆಯ ಹಾಲು “ಗಿಣ್ಣು ಹಾಲು” ಈ ಗುರುವಿಗೆ ನೈವೇದ್ಯ ಮಾಡಲಾಗುತ್ತದೆ.
ವಿಶಿಷ್ಟ ದಿನದಂದು “ಮೂಲ ನಕ್ಷತ್ರ” ಹೊಂದುವ ತನಕ ರಥವು ಚಲಿಸುವುದಿಲ್ಲ. ಮೂಲ ನಕ್ಷತ್ರ ಕೂಡಿಬಂದಾಗ ಮಾತ್ರ ಈ ರಥವು ತಾನಾಗಿಯೇ ಚಲಿಸುತ್ತದೆ. ಸ್ವತಃ ಶ್ರೀ ಗುರು ಕೊಟ್ಟೂರೇಶ್ವರ ರಥದಲ್ಲಿ ಕುಳಿತುಕೊಂಡಿದ್ದಾನೆ ಎನ್ನಲಾಗುತ್ತದೆ.
ಉತ್ಸಾಹಿ ಭಕ್ತಾದಿಗಳು “ಓಂ ಶ್ರೀ ಕೊಟ್ಟೂರೇಶ್ವರಾಯ ನಮಃ” ಎಂದು ಮಂತ್ರ ಜಪಿಸುತ್ತ ರಥವನ್ನು ಎಳೆಯುತ್ತಾರೆ.
ನಂತರ, ರಥೋತ್ಸವಕ್ಕೆ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗುತ್ತದೆ.
ಚಿತ್ರ ಕೃಪೆ: @kiranks Twitter
