ಬೇಸಿಗೆಯ ಆಗಮನಕ್ಕೆ ಕೆಲವೇ ವಾರಗಳಿರುವಾಗ, ಜಲ ಮೂಲಗಳು ಬತ್ತಿಹೋಗುತ್ತಿವೆ. ಕೊಡಗು ಜಿಲ್ಲೆಯ ನಿವಾಸಿಗಳು ತಳಮಳಗೊಳ್ಳುತ್ತಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಾದರೂ, ಕೆರೆ-ತೊರೆಗಳಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಕೂಟುಹೊಳೆ, ಪಂಪಿನಕೆರೆ, ಕನ್ನಂಡಬಾಣೆ ಮತ್ತು ರೋಶನಾರಾ ಕೆರೆ – ಮಡಿಕೇರಿ ನಿವಾಸಿಗಳಿಗೆ ನೀರಿನ ಮೂಲಗಳಾಗಿದ್ದವು. ಕಳೆದ ಮಳೆಗಾಲದಲ್ಲಿ ಈ ಕೆರೆಗಳು ತುಂಬಿದ್ದವು. ಈಗ ನೀರಿನ ಮಟ್ಟ ಇಳಿಮುಖವಾಗಿರುವುದು ಇಲ್ಲಿನ ನಿವಾಸಿಗಳಲ್ಲಿ ತಳಮಳ ಮನೆಮಾಡಿದೆ. ಬೇಸಿಗೆಯಲ್ಲಿ ಕಷ್ಟವಾಗಬಹುದು ಎಂಬುದು ಅವರ ಅಭಿಪ್ರಾಯ.
ಮಹದೇವಪೇಟೆ, ರಾಣಿಪೇಟೆ, ಗಣಪತಿ ಬೀದಿ ವಾರ್ಡುಗಳಲ್ಲಿ ಈಗಾಗಲೇ ಎರಡು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಇನ್ನೂ ಕಷ್ಟವಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ, ನೀರನ್ನು ಮಿತವಾಗಿ ಉಪಯೋಗಿಸುವಂತೆ ಸಿಎಂಸಿ ಆಯುಕ್ತ ರಮೇಶ್ ಜನರಲ್ಲಿ ಮನವಿ ಮಾಡಿದ್ದಾರೆ. ನೀರನ್ನು ಕಾರು ತೊಳೆಯುವಂಥ ಚಟುವಟಿಕೆಗಳಿಗಾಗಿ ಬಳಸಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
