ಭಾರತವು ಇದೇ ಮೊದಲ ಬಾರಿಗೆ ಇಸ್ಲಾಮಿ ದೇಶಗಳ (ಒಐಸಿ) ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಿಸಲಿದೆ. ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಈ ಸಭೆಯು ಮುಂದಿನ ತಿಂಗಳು ಅಬು ಧಾಭಿಯಲ್ಲಿ ನಡೆಯಲಿದೆ.
ಈ ಆಮಂತ್ರಣಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಮಂತ್ರಲಯವು, ಭಾರತದಲ್ಲಿ ೧೮೫ ದಶಲಕ್ಷ ಮುಸ್ಲಿಮರು ವಾಸಿಸುತ್ತಿದ್ದಾರೆ, ನಮ್ಮ ದೇಶದ ಬಹುಮುಖಿತ್ವ ಮತ್ತು ಇಸ್ಲಾಮಿ ಸಮುದಾಯಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಅಂಗೀಕರಿಸಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದೆ. ಭಾರತವ ಈ ಆಮಂತ್ರಣವನ್ನು ಸ್ವೀಕರಿಸಿದೆ.
ಪುಲ್ವಾಮಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ರಾಜತಾಂತ್ರಿಕ ಕ್ರಮ ಕೈಗೊಳ್ಳುತ್ತಿರುವ ಸಮಯದಲ್ಲಿ ಭಾರತಕ್ಕೆ ಒಐಸಿ ಆಮಂತ್ರಣ ಬಂದಿರುವುದು ಕುತೂಹಲಕ್ಕೆ ಎಡೆಮಾಡಿದೆ.
ಇದುವರೆಗೂ ಕಾಶ್ಮೀರ ಸೇರಿದಂತೆ ಹಲವಾರು ವಿಚಾರಗಳಲ್ಲಿ ಒಐಸಿ ಪಾಕಿಸ್ತಾನದ ಪರ ವಹಿಸಿದೆ.
ಬಾಂಗ್ಲಾದೇಶ ಕಳೆದ ಒಐಸಿ ಸಭೆಯಲ್ಲಿ ಮುಸ್ಲಿಮೇತರ ರಾಷ್ಟ್ರಗಳಿಗೂ ಸಹ ಭಾಗವಹಿಸಲು ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಈ ಬಾರಿ ಆಮಂತ್ರಣ ದೊರಕಿದೆ.
