ಬೆಂಗಳೂರಿನ ವೈಯಾಲಿ ಕಾವಲ್‌ನ ಮನೆಯೊಂದರಲ್ಲಿ ಹಿರಿಯ ಪೋಷಕರಾದ ಪಿ ರಾಜಗೋಪಾಲ್ (೭೪) ಮತ್ತು ಎ ವಿಜಯಾ (೭೧), ತಮ್ಮ ಮಗ ಸ್ಕಂದ ಶರತ್ (೩೬) ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅನುಚಿತವಾಗಿ ವರ್ತಿಸುತ್ತಿದ್ದಾನೆ, ಕಿರುಕುಳ ಕೊಡುತ್ತಿದ್ದಾನೆ” ಎಂದು ದೂರು ನೀಡಿದರು. ತಮ್ಮ ಜೀವನ ನಿರ್ವಹಿಸಲು ಹಣ ನೀಡುತ್ತಿಲ್ಲ, ಇದರಿಂದ ತಮಗೆ ತೊಂದರೆಯಾಗುತ್ತಿದೆ. ಮೊದಲನೆಯ ಮಹಡಿಯ ಮೇಲೆ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಮಗ ಮನೆ ಖಾಲಿ ಮಾಡಿದಲ್ಲಿ, ಆ ಮನೆಯನ್ನು ಬಾಡಿಗೆಗೆ ನೀಡಿ ಬಾಡಿಗೆ ಹಣದಿಂದ ತಮ್ಮ ಜೀವನ ನಿರ್ವಹಿಸಬಹುದು ಎಂದು ತಮ್ಮ ದೂರಿನಲ್ಲಿ ತಿಳಿಸಿದರು. ದೂರನ್ನು ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರು.
ಈ ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ, ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ನ್ಯಾಯಮಂಡಳಿ ಮುಖ್ಯಸ್ಥರೂ ಆಗಿದ್ದರು. ತಮ್ಮ ಆದೇಶದಲ್ಲಿ ಮಗ ಸ್ಕಂದ ಶರತ್ ಪ್ರತಿ ತಿಂಗಳೂ ೧೦,೦೦೦ ರೂಪಾಯಿಗಳನ್ನು ಪಾವತಿಸಬೇಕು, ಹಾಗೂ ೩೦ ದಿನಗಳೊಳಗಾಗಿ ಮನೆ ಖಾಲಿ ಮಾಡಬೇಕು ಎಂದು ನಿರ್ದೇಶನ ನೀಡಿದ್ದರು. ಈ ನಿರ್ದೇಶನ ೨೦೧೮ರ ಡಿಸೆಂಬರ್ ೪ರಂದು ನೀಡಲಾಯಿತು.
ಇದರ ವಿರುದ್ಧ ಸ್ಕಂದ ಶರತ್ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ. ಸರ್ಕಾರದ ಪರ ವಾದಿಸಿದ ವಕೀಲರು ಸ್ಕಂದ ಶರತ್ ನಡೆದುಕೊಂಡ ರೀತಿಯನ್ನು ನ್ಯಾಯಾಲಯಕ್ಕೆ ತಿಳಿಸಿ ತಮ್ಮ ವಾದ ಮಂಡಿಸಿದರು. ಪೋಷಕರನ್ನು ಭಾವನಾತ್ಮಕವಾಗಿ ಹಾಗು ದೈಹಿಕವಾಗಿ ಹಿಂಸಿಸುತ್ತಿದ್ದ ಮಗ, ತಾಯಿಯನ್ನು ಒಮ್ಮೆ ಮೆಟ್ಟಿಲುಗಳಿಂದ ಕೆಳಕ್ಕೆ ದಬ್ಬಿದ ಕಾರಣ ಅಪರಾಧ ಮೊಕದ್ದಮೆ ಎದುರಿಸುತ್ತಿದ್ದಾನೆ ಎಂದು ಸರ್ಕಾರ ಪರ ವಕೀಲ ಮಾಹಿತಿ ನೀಡಿದರು.
ಈ ವಿಚಾರಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ಏಕಸದಸ್ಯ ಪೀಠವು, ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿಯಿತು. ಸ್ಕಂದ ಶರತ್‌ಗೆ ಮನೆ ಖಾಲಿ ಮಾಡಲು ಹೇಳಿತು.
ಸಿಬಿನ್ ಪನಯಿಲ್ ಸೊಮನ್
ಸಹ ಉಪಾಧ್ಯಕ್ಷರು (ಕಾರ್ಯನಿರ್ವಹಣೆ), ಇಂಡ್‌ಸಮಾಚಾರ್
