ಊದಾ ಕವಜುಗ (ಫ್ರಾಂಕೋಲಿನಸ್ ಪಾಂಡಿಸೆರಿಯಾನಸ್) ಬಯಲು ಮತ್ತು ದಕ್ಷಿಣ ಏಷ್ಯಾದ ಒಣ ಭಾಗಗಳ ಕವಜುಗ ಒಂದು ಜಾತಿಯ ಪಕ್ಷಿ. ಇದು ತೆರೆದ ಕೃಷಿ ಭೂಮಿಗಳಲ್ಲಿ ಮತ್ತು ಪೊದೆಗಳು ಅರಣ್ಯ ಭೂಮಿಗಳಲ್ಲಿ ಹೆಚ್ಛಾಗಿ ಕಂಡು ಬರುತ್ತದೆ. ಟೀ-ಟರ್ ಎನ್ನುವ ಇದರ ಕರೆಯ ಮೂಲಕ ಈ ಪಕ್ಶಿಗಳನ್ನು ಸುಲಭವಾಗಿ ಗುರುತಿಸಬಹುದು.
ಕವಜುಗಗಳು ತಮ್ಮ ದೇಹದ ಮೇಲೆ ಉದ್ದಕ್ಕೂ ಗೆರೆಗಳನ್ನು ಹೊಂದಿರುತ್ತವೆ. ಮತ್ತು ಮುಖವು ಮಸುಕು ಬಣ್ಣ ಹಾಗು ಗಂಟಲಿನ ಮೇಲೆ ಒಂದು ತೆಳುವಾದ ಕಪ್ಪು ಪಟ್ಟಿ ಇರುತ್ತದೆ. ಇವು ಸಾಮಾನ್ಯವಾಗಿ ಅಲ್ಪ ದೂರಕ್ಕೆ ಹಾರುವ ಹಕ್ಕಿಗಳು. ಶತ್ರುಗಳಿಂದ ತಪ್ಪಿಸಿಕೊಳ್ಳಲು ಇವು ಗಿಡಗಂಟೆಗಳ ಒಳಗೆ ಓಡುತ್ತವೆ. ಊದಾ ಕವಜುಗ ಪಕ್ಷಿಗಳ ಹತ್ತಿರದ ಉಪಜಾತಿಯೆಂದರೆ – ರಂಗುರಂಗಿನ ಕವಜುಗ ಫ್ರಾಂಕೋಲಿನಸ್ ಪಿಕ್ಟಸ್.
ಊದಾ ಕವಜುಗ ಸಾಮಾನ್ಯವಾಗಿ ಪೊದೆಗಳು ಮತ್ತು ತೆರೆದ ನೆಲದ ಪ್ರದೇಶಗಳಲ್ಲಿ ಮತ್ತು ಹುಲ್ಲು ಗಾವಲುಗಳಲ್ಲಿ ಕಂಡುಬರುತ್ತದೆ, ಮತ್ತು ವಿರಳವಾಗಿ ಭಾರತದ ಸಮುದ್ರ ಮಟ್ಟದಿಂದ 500 ಮೀ, ಮತ್ತು ಪಾಕಿಸ್ತಾನದಲ್ಲಿ 1200 ಮೀಟರ್ ಗಳಷ್ಟು ಎತ್ತರ ಪ್ರದೇಶಗಳಲ್ಲೂ ಸಹ ಕಂಡುಬರುತ್ತದೆ. ಇಷ್ಟಲ್ಲದೇ ಸಿಂಧೂ ಕಣಿವೆ ಮತ್ತು ಬಂಗಾಳದ ಪೂರ್ವಕ್ಕೆ, ಹಿಮಾಲಯದಿಂದ ಪಶ್ಚಿಮಾಭಿಮುಖವಾಗಿ ತಪ್ಪಲಿನಲ್ಲಿ ದಕ್ಷಿಣ ಮತ್ತು ವಾಯುವ್ಯ ಶ್ರೀಲಂಕಾ ದಲ್ಲಿಯೂ ಕಂಡುಬರುತ್ತದೆ.
ನಡವಳಿಕೆ ಮತ್ತು ಪರಿಸರವಿಜ್ಞಾನ
ಊದಾ ಕವುಜಗಗಳ ಪಕ್ಷಿಗಳ ಕರೆಗಳು ಸಾಮಾನ್ಯವಾಗಿ ಮುಂಜಾವಿನಲ್ಲಿ ಜೋರಾಗಿ ಕೇಳಿಸುತ್ತವೆ. ಮುಖ್ಯ ಸಂತಾನವೃದ್ಧಿ ಋತುವು ಸೆಪ್ಟೆಂಬರ್ ನಿಂದ ಏಪ್ರಿಲ್ ವರೆಗೆ. ಈ ಹಕ್ಕಿಗಳು ನೆಲದ ಮೇಲೆ ಗೂಡನ್ನು ಕಟ್ಟುತ್ತದೆ. ಮತ್ತು ಕೆಲವೊಮ್ಮೆ ಒಂದು ಗೋಡೆಯ ಅಥವಾ ಕಲ್ಲು ಬಂಡೆಗಳ ನಡುವೆ ಸಹ ಕಟ್ಟುತ್ತದೆ. ಈ ಗೂಡುಗಳಲ್ಲಿ ಆರರಿಂದ ಎಂಟು ಮೊಟ್ಟೆಗಳನ್ನು ಹೆಣ್ಣು ಹಕ್ಕಿಯು ಹಾಕುತ್ತದೆ. ಈ ಹಕ್ಕಿಗಳ ಮುಖ್ಯ ಆಹಾರ ಜೀರುಂಡೆಗಳು, ಪುಟ್ಟ ಹಾವುಗಳು, ಗೆದ್ದಲುಗಳು, ಬೀಜಗಳು, ಕಾಳುಗಳು ಹಾಗೂ ಇತರೆ ಕೀಟಗಳು. ಊದಾ ಕವುಜಗಗಳು ಕಡಿಮೆ ಮುಳ್ಳಿನ ಮರಗಳ ಮೇಲೆ ಗುಂಪುಗಳಲ್ಲಿ ವಿಶ್ರಮಿಸುತ್ತವೆ.
ಬೇಟೆಯಾಡುವಿಕೆ: ಕವುಜಗಗಳನ್ನು ಮಾನವನು ಬಹಳ ಕಾಲದಿಂದ ಅದರ ಮಾಂಸಕ್ಕಾಗಿ ಬಲೆಗಳನ್ನು ಬಳಸಿ ಹಿಡಿಯುತ್ತಾನೆ. ಹೆಚ್ಚು ದೂರ ಹಾರಲು ಅಶಕ್ತವಾದ ಕಾರಣ ಬಹಳ ಸುಲಭವಾಗಿ ಈ ಹಕ್ಕಿಗಳು ಬಲೆಯ ಮೇಲಿನ ಕಾಳುಗಳ ಆಸೆಗಾಗಿ ಸಿಕ್ಕಿ ಬಿದ್ದು ಬಲಿಯಾಗುತ್ತಿವೆ. ನೆಲೆಯ ನಾಶ ಎಂದಿನಿಂದಲೂ ಈ ಹಕ್ಕಿಗಳ ನೆಲೆಯಾಗಿದ್ದ ಪ್ರದೇಶಗಳಲ್ಲಿ ಇಂದು ಮಾನವನು ಕೃಷಿ ಚಟುವಟಿಕೆಗಳಲ್ಲಿ, ಕಟ್ಟಡ ನಿರ್ಮಾಣಗಳಲ್ಲಿ ತೊಡಗಿದ್ದಾನೆ. ಇದರಿಂದಾಗಿ ಕವುಜಗಗಳು ತಮ್ಮ ಆಹಾರದ ಸಹಜ ನೆಲೆಯನ್ನು ಕಳೆದುಕೊಳ್ಳುತ್ತಿವೆ.
