ಕೆಲ ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ಶಾಸಕರು, ಸಭೆಗಳಿಂದ ತಮ್ಮ ಗೈರಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದಿದ್ದಾರೆ.
“ನಮ್ಮ ಪಕ್ಷದ ನಾಯಕರೊಂದಿಗೆ ಕೆಲ ಭಿನ್ನಾಭಿಪ್ರಾಯಗಳಿದ್ದವು. ಜೊತೆಗೆ ಸಂವಹನದಲ್ಲಿ ಲೋಪವಿತ್ತು. ಪಕ್ಷ ತೆಗೆದುಕೊಂಡ ಕೆಲ ನಿರ್ಧಾರಗಳು ನನಗೆ ಹಿಡಿಸಲಿಲ್ಲ. ಇದು ಬಜೆಟ್ ಅಧಿವೇಶನವಾಗಿರುವುದರಿಂದ, ನಾನು ವಾಪಸ್ ಬಂದಿರುವೆ” ಎಂದು ಶಾಸಕ ಮಹೇಶ್ ಕುಮತಳ್ಳಿ ಅವರು ಹೇಳಿದರು.
ಇನ್ನೊಬ್ಬ ಭಿನ್ನಮತೀಯ ಶಾಸಕ ಉಮೇಶ್ ಜಾಧವ್ ಸಹ ಹೆಚ್ಚೂಕಡಿಮೆ ಇದೇ ರೀತಿಯ ವಿವರಣೆ ನೀಡಿ, “ಈ ವಿಚಾರಗಳನ್ನು ನಮ್ಮ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚಿಸುವೆ. ಸೂಕ್ತ ಸಮಯ ಸಿಕ್ಕಾಗ ನಾನು ಮಾತನಾಡುವೆ. ಮಲ್ಲಿಕಾರ್ಜುನ ಖರ್ಗೆ ಬಹಳ ಹಿರಿಯ ನಾಯಕರು. ಅವರ ವಿರುದ್ಧ ನಾನು ಮಾತನಾಡಲಾರೆ” ಎಂದರು.
ಕಾಂಗ್ರೆಸ್ ಮುಖಂಡ ಹಾಗೂ ಮಂತ್ರಿ ಡಿ ಕೆ ಶಿವಕುಮಾರ ಅವರ ಪ್ರಕಾರ, ಎಲ್ಲಾ ನಾಲ್ವರೂ ಭಿನ್ನಮತೀಯರು ವಾಪಸ್ ಬಂದಿದ್ದಾರೆ.
ಸಿಎಲ್‌ಪಿ ನಾಯಕ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ವಿಧಾನ ಸಭೆಯ ಅಧ್ಯಕ್ಷ ರಮೇಶ್ ಕುಮಾರ್ ಅವರೊಂದಿಗೆ ಭೇಟಿಯಾಗಿ ಈ ನಾಲ್ವರೂ ಭಿನ್ನಮತೀಯರನ್ನು ಅನರ್ಹಗೊಳಿಸಿರೆಂದು ಮನವಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
