ಕಳೆದ ಗುರುವಾರ ಪುಲ್ವಾಮಾದಲ್ಲಿ ನಡೆದ ಪಾಕಿಸ್ತಾನಿ ಭಯೋತ್ಪಾದನಾ ಕೃತ್ಯದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿರುವ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ತನ್ನ ಸ್ವಾಮ್ಯದ ಬ್ರಬೊರ್ನ್ ಕ್ರೀಡಾಂಗಣದಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ ಇಮ್ರಾನ್ ಖಾನ್ ಭಾವಚಿತ್ರವನ್ನು ಸದ್ಯಕ್ಕೆ ಮುಚ್ಚಿದೆ.
ಇಮ್ರಾನ್ ಖಾನ್ ಅವರ ಕ್ರಿಕೆಟ್ ಸಾಧನೆಗಳ ಬಗ್ಗೆ ನಮಗೆ ಗೌರವಿವಿದೆ. ಆದರೆ ಅವರು ಈಗ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದಾರೆ. ನಾವು ನಮ್ಮ ದೇಶ ಮತ್ತು ಸೈನಿಕರಿಗೆ ಬೆಂಬಲ ನೀಡುತ್ತೇವೆ ಎಂದು ಸಿಸಿಐ ಅಧ್ಯಕ್ಷ ಪ್ರೇಮಲ್ ಉದಾನಿ ಹೇಳಿದರು.
ಸದ್ಯಕ್ಕೆ ಇಮ್ರನ್ ಅವರ ಭಾವಚಿತ್ರವನ್ನು ಮುಚ್ಚಿದ್ದೇವೆ, ನಂತರ ಬಾವಚಿತ್ರವನ್ನು ಶಾಶ್ವತವಾಗಿ ತೆಗೆದುಬಿಡುವ ಕುರಿತು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.
ತಾವು ಪಾಕಿಸ್ತಾನದ ಪರ ಕ್ರಿಕೆಟ್ ಆಡುವಾಗ ಇಮ್ರಾನ್ ಮೂರು ಪಂದ್ಯಗಳನ್ನು ಬ್ರಬೊರ್ನ್ ಕ್ರಿಕಟ್ ಕ್ರೀಡಾಂಗಣದಲ್ಲಿ ಆಡಿದ್ದರು. ೧೯೮೯ರಲ್ಲಿ ನಡೆದ ನೆಹರೂ ಕಪ್ ಪಂದ್ಯಾವಳಿಯ ಪಂದ್ಯವೊಂದರಲ್ಲಿ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾದ ವಿರುದ್ಧ ಗೆಲುವು ತಂದುಕೊಟ್ಟು ಪಂದ್ಯದ ಪುರುಷೋತ್ತಮ ಕೂಡ ಆಗಿದ್ದರು.
ವಿಶ್ವದ ಪ್ರಮುಖ ದೇಶದ ನಾಯಕರು ಪುಲ್ವಾಮಾ ಹತ್ಯಾಕಾಂಡವನ್ನು ಖಂಡಿಸುತ್ತಿದ್ದಾಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ವಿದೇಶ ವ್ಯವಹಾರ ಖಾತೆ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿತ್ರ ಕೃಪೆ: Picture courtesy: ANI
