ಬಲೋಚಿಸ್ತಾನದಲ್ಲಿ ರಾಜಕೀಯ ದಬ್ಬಾಳಿಕೆಯ ಮೂಲಕ ಪಾಕಿಸ್ತಾನವು ತೋರುತ್ತಿರುವ ಮಲತಾಯಿ ಧೋರಣೆಯಿಂದಾಗಿ ಬಲೋಚಿಸ್ತಾನ ಪ್ರಾಂತ್ಯವು ತೀರ ಕೆಟ್ಟ ಸ್ಥಿತಿಯಲ್ಲಿದೆ. ಈ ಪ್ರಾಂತ್ಯದಲ್ಲಿ ಸಮೃದ್ಧ ಖನಿಜ ಸಂಪತ್ತು ಹೊಂದಿದ್ದರೂ ಈ ತರಹದ ಪರಿಸ್ಥಿತಿಯಲ್ಲಿರುವುದು ವಿಪರ್ಯಾಸ.
ವ್ಯವಸ್ಥಿತವಾಗಿ ಆರ್ಥಿಕ ದಬ್ಬಾಳಿಕೆಯಿಂದಾಗಿ ಸ್ಥಳೀಯರು, ಕಾರ್ಯಕರ್ತರು ಮತ್ತು ಮುಖಂಡರು ಪಾಕಿಸ್ತಾನ ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತಿದ್ದುಂಟು. ಆದರೆ ಪಾಕಿಸ್ತಾನದ ಸೇನೆ ಮತ್ತು ಭದ್ರತಾ ಪಡೆಗಳು ಇವರ ಧ್ವನಿಯನ್ನಷ್ಟೇ ಅಲ್ಲ, ಇವರ ಹುಟ್ಟನ್ನೂ ಅಡಗಿಸಿದ್ದುಂಟು.
ಆದರೂ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಎದೆಗುಂದುತ್ತಿಲ್ಲ. ಬಲೋಚ್ ಸೇನೆ ಬಿಎಲ್‌ಎ ಯ ಹೊಸ ಮುಖ್ಯಸ್ಥ ಬಷೀರ್ ಜೈಬ್ ಬಲೋಚ್ ಹೇಳುವ ಪ್ರಕಾರ, ಬಲೋಚಿಸ್ತಾನದಲ್ಲಿನ ಪರಿಸ್ಥಿತಿ ಪ್ಯಾಲಿಸ್ಟೀನ್, ಇರಾಕ್ ಮತ್ತು ಅಪ್ಘಾನಿಸ್ತಾನದ ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ. ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡುವಲ್ಲಿ ಅಂತರರಾಷ್ಟ್ರೀಯ ಸಮುದಾಯದವರ ನೆರವನ್ನು ಕೋರಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಆತ್ಮಾಹುತಿ ಧಾಳಿಯಲ್ಲಿ ಬಿಎಲ್‌ಎಯ ಅಂತಿನ ನಾಯಕ ಅಸ್ಲಮ್ ಬಲೊಚ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಷೀರ್ ಜೈಬ್ ಬಲೋಚ್ ನಾಯಕತ್ವ ವಹಿಸಿಕೊಂಡರು.
ಚೀನಾ ಸಹವಾಸ ಬೆಳೆಸಿಕೊಂಡು ಚೀನಾ ಪಾಕಿಸ್ತಾನ ಆರ್ಥಿಕ ಪಥ (ಸಿಪಿಇಸಿ) ಒಪ್ಪಂದಕ್ಕೆ ಸಹಿ ಹಾಕಿದಾಗಿಂದಲೂ ಬಲೋಚಿಸ್ತಾನದಲ್ಲಿ ದಬ್ಬಾಳಿಕೆ ಇನ್ನೂ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ತೀವ್ರವಾಗಿದೆ ಎಂದು ಬಷೀರ್ ಜೈಬ್ ಬಲೋಚ್ ಹೇಳಿದ್ದಾರೆ. ಬಲೋಚಿಗಳು ತಮ್ಮ ಕೊನೆಯುಸಿರಿನ ತನಕ ಇದರ ವಿರುದ್ಧ ಹೋರಾಡುತ್ತಾರೆ ಎಂದು ಹೇಳಿದ್ದಾರೆ.
ಸಿಪಿಇಸಿ ಯೋಜನೆ ಬಲೋಚಿಸ್ತಾನದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಕಾರಣ, ಅಲ್ಲಿ ಸಿಪಿಇಸಿಗೆ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಬಲೋಚ್, ಷಿಯಾ, ಹಜಾರಾ, ಅಹ್ಮದಿಯಾ ಪಂಗಡದವರ ಮೇಲೆ ಪಾಕಿಸ್ತಾನವು ದೌರ್ಜನ್ಯ ಮಾಡುಗ್ತಲೇ ಬಂದಿದೆ. ಆದರೆ ಇಲ್ಲಿನ ಸಮಸ್ಯೆಯು ಅಂತರರಾಷ್ಟ್ರೀಯ ನಾಯಕರ ಗಮನ ಸೆಳೆಯುವಲ್ಲಿ ವಿಫಲವಾಗಿದೆ.
ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಪ್ರಮುಖ ಬಲೋಚ್ ಮುಖಂಡರು, ಸೇನಾ ನಾಯಕರು ಮತ್ತು ಕಾರ್ಯಕರ್ತರು ಕಾಣೆಯಾಗಿದ್ದಾರೆ. ನಾಪತ್ತೆಯ ಹಿಂದೆ ಯಾರ ಕೈವಾಡವಿದೆ ಎಂದು ಊಹಿಸಬಲ್ಲ ಬಲೋಚ್ ಹೋರಾಟಗಾರರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
