ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ – ಒಂದು ಪಕ್ಷಿನೋಟ
ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣವು ಎಷ್ಟು ಸುದ್ದಿಯಾಗಿದೆ ಎಂದರೆ ಹೆಲಿಕಾಪ್ಟರ್ ನೆಲ ಮುಟ್ಟಿದಾಗ ತಿರುಗುತ್ತಿರುವ ಅದರ ಪ್ರೊಪೆಲರ್‌ಗಳಿಂದ ವಿಪರೀತ ಧೂಳೆಬ್ಬಿಸಿ ಅಲ್ಲಿರುವವರೆಲ್ಲರ ತಲೆಗೂದಲು ಕೆದರಿ, ಕಣ್ಣಿಗೆ ಧೂಳೆರಚುವಂತೆ ಭಾಸವಾಗುತ್ತಿದೆ.
ಈ ಹಗರಣದಲ್ಲಿ ಸೋನಿಯಾ ಗಾಂಧಿ ಮತ್ತು ಅಹಮದ್ ಪಟೇಲ್ ಸೇರಿದಂತೆ ಹಲವು ಖ್ಯಾತ ನಾಮರ ಹೆಸರಗಳು ಭಾಗಿಯಾಗಿವೆಯೆಂದು ಕೇಳಿಬರುತ್ತಿದೆ.
ಅಷ್ಟಕ್ಕೂ ಏನು ಈ ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ?
ಇಸವಿ ೨೦೧೦ರ ಫೆಬ್ರುವರಿ ತಿಂಗಳಲ್ಲಿ ಅಂದಿನ ಯುಪಿಎ ಸರ್ಕಾರವು ೧೨ ಹೆಲಿಕಾಪ್ಟರ್‌ಗಳನ್ನು ಕೊಳ್ಳಲು ನಿರ್ಧರಿಸಿತು. ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಅತಿಗಣ್ಯರ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌ಗಳ ಅಗತ್ಯವಿತ್ತು. ಹಲವು ಕಂಪೆನಿಗಳಿಂದ ಬಿಡ್‌ಗಳನ್ನು ತೆಗೆದುಕೊಂಡ ನಂತರ, ಯುಪಿಎ ಸರ್ಕಾರವು ಆಗಸ್ಟಾವೆಸ್ಟ್‌ಲ್ಯಾಂಡ್ ಉದ್ದಿಮೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿತು. ಯುಪಿಎ ಸರ್ಕಾರವು ೩,೫೦೦ ಕೋಟಿ ಮೌಲ್ಯಕ್ಕೆ ೧೨ ಎಡಬ್ಲೂ೧೦೧ ಹೆಲಿಕಾಪ್ಟರ್‌ಗಳಿಗಾಗಿ ಆಗಸ್ಟಾವೆಸ್ಟ್‌ಲ್ಯಾಂಡ್ ಒಂದಿಗೆ ಒಪ್ಪಂದ ಮಾಡಿಕೊಂಡಿತು.
ಆಗಸ್ಟಾವೆಸ್ಟ್‌ಲ್ಯಾಂಡ್ ಇಟಲಿ ಮೂಲದ ಹೆಲಿಕಾಪ್ಟರ್ ಉದ್ದಿಮೆ. ಇದು ಉನ್ನತ ತಂತ್ರಜ್ಞಾನ ಬಳಸುವ ರಕ್ಷಣೆ ಮತ್ತು ಅಂತರಿಕ್ಷಯಾನ ಉದ್ದಿಮೆ “ಫಿನ್ಮೆಕಾನಿಕಾ”ದ ಸ್ವಾಮ್ಯದಲ್ಲಿದೆ. ಇಟಲಿ ಸರ್ಕಾರ ಫಿನ್ಮೆಕಾನಿಕಾ ಉದ್ದಿಮೆಯಲ್ಲಿ ೩೦.೨% ರಷ್ಟು ಬಂಡವಾಳ ಹೂಡಿದೆ. ಈ ಹೆಲಿಕಾಪ್ಟರ್‌ಗಳನ್ನು ಬಾರತೀಯ ವಾಯು ಸೇನಾ ಪೈಲಟ್‌ಗಳು ನಡೆಸಬೇಕಿತ್ತು.
ಭಾರತೀಯ ವಾಯುಸೇನೆಯು ಈ ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು ತಪಾಸಣೆ ಮಾಡಿ, ಇವು ಉಪಯೋಗಿಸಲು ಯೋಗ್ಯವಲ್ಲ ಎಂದು ತಿಳಿಸಿತು. ವಿವಿಐಪಿ ಸುರಕ್ಷತೆಯ ಅಗತ್ಯವನ್ನು ಪರಿಗಣಿಸಿ, ಇನ್ನೂ ಎತ್ತರದಲ್ಲಿ (ನೆಲೆಯಿಂದ ಸುಮಾರು ೬,೦೦೦ ಮೀಟರ್) ಹಾರಬಲ್ಲ ಹೆಲಿಕಾಪ್ಟರ್‌ಗಳನ್ನು ಕೊಳ್ಳಿ ಎಂದು ವಾಯು ಸೇನೆ ಸಲಹೆ ನೀಡಿತು. ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳು ಕೇವಲ ೫,೦೦೦ ಮೀಟರ್ ಗರಿಷ್ಠ ಎತ್ತರದಲ್ಲಿ ಮಾತ್ರ ಹಾರುವ ಕ್ಷಮತೆ ಹೊಂದಿದ್ದವು.
ಆದರೆ ಇದ್ದಕ್ಕಿದ್ದಂತೆ, ಅಚ್ಚರಿ ಮೂಡಿಸುವಂತೆ, ಐಎಎಫ್ ನಿಲುವು ಬದಲಾಯಿತು. ಹೊಸತಾದ ಹೇಳಿಕೆಯಲ್ಲಿ ಭಾರತೀಯ ವಾಯು ಸೇನೆಯು ಹೆಲಿಕಾಪ್ಟರ್ ಹಾರುವ ಎತ್ತರದ ಅಗತ್ಯತೆ ಕೇವಲ ೪,೫೦೦ ಮೀಟರ್ ಎಂದಿತು. ಹೀಗಾಗಿ ಆಗಸ್ಟಾವೆಸ್ಟ್‌ಲ್ಯಾಂಡ್ ಮತ್ತೆ ಮುಂದೆಬಂದು ಒಪ್ಪಂದ ಕುದುರಿಸಿಕೊಂಡಿತು. ಇದೇ ಕಾಲಕ್ಕೆ ಒ ಪಿ ತ್ಯಾಗಿ ಭಾರತೀಯ ವಾಯು ಸೇನೆಯ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಇಸವಿ ೨೦೧೨ರಲ್ಲಿ ಇಟಲಿ ಸರ್ಕಾರದ ತನಿಖೆಗಾರರು ಗೈಡೋ ಹಾಷ್ಕ್‌ರ ಮನೆಯ ಮೇಲೆ ಧಾಳಿ ಮಾಡಿದರು. ಹಾಷ್ಕ್‌ರ ಮನೆಯಲ್ಲಿ ಕ್ರಿಸ್ಟಿಯನ್ ಮಿಚೆಲ್‌ರ ಹಸ್ತಲಿಖಿತ ಚೀಟಿಗಳು ಪತ್ತೆಯಾದವು. ಮಿಚೆಲ್ ಒಬ್ಬ ಮಧ್ಯವರ್ತಿ, ಹಾಗೂ ಹಾಷ್ಕ್‌ರ ಪಾಲುದಾರರಾಗಿದ್ದರು.
ಕ್ರಿಸ್ಟಿಯನ್ ಮಿಚಲ್‌ರ ಡೈರಿಯಲ್ಲಿನ ಹೆಸರುಗಳ ಪೈಕಿ “ಸಿಗ್ನೊರಾ ಗಾಂಧಿ” ಮತ್ತು “ಅಹಮದ್ ಪಟೇಲ್”ರ ಹೆಸರುಗಳಿದ್ದವು. ಇಟಲಿಯನ್ ನ್ಯಾಯಾಲಯದಲ್ಲಿ ಗೈಡೋ ಹಾಷ್ಕ್‌ರಿಗೆ ಸೋನಿಯಾ ಗಾಂಧಿ ಮತ್ತು ಅಹಮದ್ ಪಟೇಲ್‌ರ ಭಾವಚಿತ್ರಗಳನ್ನು ತೋರಿಸಲಾಯಿತು. ಹಾಷ್ಕ್ ಆ ಭಾವಚಿತ್ರಗಳಲ್ಲಿರುವವರನ್ನು ಸಿಗ್ನೊರಾ ಗಾಂಧಿ ಮತ್ತು ಅಹಮದ್ ಪಟೇಲ್ ಎಂದು ಖಚಿತಪಡಿಸಿದರು.
ಕ್ರಿಸ್ಟಿಯನ್ ಮಿಚೆಲ್‌ರ ತಂದೆ ವುಲ್ಫ್ಗಾಂಗ್ ಮಿಚೆಲ್ ಸೋನಿಯಾ ಗಾಂಧಿ ಅವರ ನಿಕಟ ಸ್ನೇಹಿತರಾಗಿದ್ದರು. ೧೯೯೦ರ ದಶಕದಲ್ಲಿ ಸೋನಿಯಾ ಗಾಂಧಿ ಲಂಡನ್‌ಗೆ ಹೋದಾಗ ವುಲ್ಫ್ಗಾಂಗ್ ಮಿಚೆಲ್‌ರ ಮನೆಯಲ್ಲಿ ತಂಗುತ್ತಿದ್ದರು.
ಇಸವಿ ೨೦೧೩ರಲ್ಲಿ ಕೇಂದ್ರೀಯ ತನಿಖಾ ಆಯೋಗ (ಸಿಬಿಐ) ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ತನಿಖೆ ಆರಂಭಿಸಿತು. ಸಿಬಿಐ ಹೇಳಿಕೆಯ ಪ್ರಕಾರ ಲಂಚಗಳ ಒಟ್ಟು ಮೊತ್ತ ೨೫೦ ಕೋಟಿ ರೂಪಾಯಿಗಳಾಗಿದ್ದವು. ಈ ಹಣವನ್ನು ಬ್ರಿಟನ್ ಮತ್ತು ಯುಎಇನಲ್ಲಿರುವ ಬ್ಯಾಂಕ್ ಖಾತೆಗಳ ಮೂಲಕ ರವಾನೆ ಮಾಡಲಾಯಿತು.
ಇದೇ ವೇಳೆ ಇಟಲಿಯನ್ ಸರ್ಕಾರ ತನ್ನದೇ ತನಿಖೆ ನಡೆಸಿತು. ೨೦೧೬ರ ಏಪ್ರಿಲ್ ೮ರಂದು ಮಿಲಾನ್ ನ್ಯಾಯಾಲಯವು ತನ್ನ ೨೨೫ ಪುಟಗಳ ತೀರ್ಪಿನಲ್ಲಿ ಆಗಸ್ಟಾವೆಸ್ಟ್‌ಲ್ಯಾಂಡ್ ಮುಖ್ಯಸ್ಥ ಗಿಸೆಪ್ ಆರ್ಸಿ ಅವರನ್ನು ದೋಷಿ ಎಂದಿತು. ಬಾರತದ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಐಎಎಫ್ ಅಧಿಕಾರಿಗಳಿಗೆ ೩೦ ಲಕ್ಷ ಯೂರೋ ಮೊತ್ತದ ಲಂಚ ಕೊಟ್ಟಿದ್ದಕ್ಕೆ ಆರ್ಸಿ ಅವರಿಗೆ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿತು.
ಭಾರತ ಸರ್ಕಾರ ಯುಎಇ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ ಫಲವಾಗಿ ೨೦೧೮ರ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಟಿಯನ್ ಮಚೆಲ್‌ರನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಕ್ರಿಸ್ಟಿಯನ್ ಈಗ ಸಿಬಿಐ ವಶದಲ್ಲಿದ್ದಾರೆ.
ಒಂದು ವೇಳೆ ಕ್ರಿಸ್ಟಿಯನ್ ಮಿಚೆಲ್ ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದ ಬಗ್ಗೆ ಬಾಯಿಬಿಟ್ಟರೆ ಸೋನಿಯಾ ಗಾಂಧಿ ದೋಷಿಯಾಗುತ್ತಾರಾ? ಶಿಕ್ಷೆಗೊಳಗಾಗುತ್ತಾರಾ? ಕಾಲವೇ ಹೇಳಬೇಕು.
