ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ವಿರುದ್ಧ ವಾಗ್ಧಾಳಿ ನಡೆಸಿ, ಫುಲ್ವಾಮಾ ಭಯೋತ್ಪಾದನಾ ಕೃತ್ಯದ ಹಿಂದಿರುವವರನ್ನು ಖಂಡಿತವಾಗಿಯೂ ಶಿಕ್ಷಿಸುತ್ತೇವೆ. ಅವರು ಅವಿತುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ. ಮೋದಿಯವರು ಭಾರತ ದೇಶದ ಜನರಿಗೆ ತಾಳ್ಮೆಯಿಂದಿದ್ದು ಅವರ ಸರ್ಕಾರದ ಮೇಲಿಟ್ಟ ವಿಶ್ವಾಸವನ್ನು ಮುಂದುವರೆಸಲು ಮನವಿ ಮಾಡಿದರು.
ಮೋದಿಯವರು ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಭಾಷಣ ಮಾಡುತ್ತ ಈ ರೀತಿ ಹೇಳಿದರು. ಪುಲ್ವಾಮಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಸೇನಾ ಪಡೆಗಳಲ್ಲಿರುವವರ, ಅದರಲ್ಲೂ ವಿಶಿಷ್ಟವಾಗಿ ಸಿಆರ್ಪಿಎಫ್ ಸೈನಿಕರಲ್ಲಿ ಉಗ್ರಕೋಪವಿರುದು ಈ ದೇಶಕ್ಕೆ ಅರ್ಥವಾಗುತ್ತದೆ. ಈ ಕಾರಣಕ್ಕಾಗಿಯೇ ಉಗ್ರರನ್ನು ಮಟ್ಟ ಹಾಕಲು ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೋದಿಯವರು ಹೇಳಿದರು.
ಹುತಾತ್ಮರ ತ್ಯಾಗವನ್ನು ಈ ದೇಶವು ಎಂದಿಗೂ ಮರೆಯುವುದಿಲ್ಲ. ಭಯೋತ್ಪಾದನಾ ಸಂಘಟನೆಗಳು ಮತ್ತು ಅವುಗಳ ಪೋಷಕರು ಅವಿತುಕೊಳ್ಳಲು ಅದೆಷ್ಟೇ ಪ್ರಯತ್ನಿಸಿದರೂ ಅವರೆಲ್ಲರೂ ಮಾಡಿದ ಪಾಪಕ್ಕೆ ನಾವು ಶಿಕ್ಷೆ ವಿಧಿಸಿಯೇ ತೀರುತ್ತೇವೆ ಎಂದು ಮೋದಿ ಹೇಳಿದರು.
ಇಬ್ಭಾಗವಾದ ನಂತರ ಅಸ್ತಿತ್ವಕ್ಕೆ ಬಂದಾಗಿಂದಲೂ ಪಾಕಿಸ್ತಾನವು ಭಯೋತ್ಪಾದನೆಗೆ ಆಶ್ರಯ ನೀಡುತ್ತಲೇ ಬಂದಿದೆ. ಇದರ ಆರ್ಥಿಕತೆ ದಿವಾಳಿತನದ ಸನಿಹದಲ್ಲಿದೆ. “ಪಾಕಿಸ್ತಾನ” ಎಂಬುದು “ಭಯೋತ್ಪಾದನೆ”ಗೆ ಸಮಾನಾರ್ಥಕ ಎಂದು ಮೋದಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು.
