ಆಯ್ಕೆ ಪ್ರಕ್ರಿಯೆಯಲ್ಲಿ ತಿರಸ್ಕೃತರಾದ ಇಬ್ಬರು ಕ್ರಿಕೆಟಿಗರು ದೆಹಲಿ ಕ್ರಿಕೆಟ್ ತಂಡದ ಆಯ್ಕೆದಾರ ಹಾಗೂ ಮಾಜಿ ಕ್ರಿಕೆಟಿಗ ಅಮಿತ್ ಭಂಡಾರಿ ಅವರನ್ನು ಥಳಿಸಿದ ಘಟನೆ ಇಂದು ಹೊಸದೆಹಲಿಯಲ್ಲಿ ನಡೆದಿದೆ.
ಮುಷ್ತಾಕ್ ಅಲಿ ಟ್ರೊಫಿ ಪಂದ್ಯಾವಳಿಗಾಗಿ ೨೩ ವರ್ಷ ವಯಸ್ಸಿಗಿಂತಲೂ ಕಿರಿಯರ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಉತ್ತರ ದೆಹಲಿಯ ಸೇಂಟ್ ಸ್ಟೀಫನ್ಸ್ ಮೈದಾನದಲ್ಲಿ ನಡೆಯುತ್ತಿತ್ತು.
ಆಯ್ಕೆ ಪ್ರಕ್ರಿಯೆಯಲ್ಲಿ ತಿರಸ್ಕೃತರಾದ ಇಬ್ಬರೋ ಮೂವರೋ ಕ್ರಿಕೆಟಿಗರು ಭಂಡಾರಿ ಅವರ ಬಳಿ ಬಂದು ಕ್ರಿಕೆಟ್ ಬ್ಯಾಟಿನಲ್ಲಿ ತಲೆಗೆ ಹೊಡೆದರು. ಭಂಡಾರಿ ಅವರ ತಲೆಯಿಂದ ರಕ್ತ ಸುರಿದು, ಅವರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದರು.
ತಿರಸ್ಕೃತ ಕ್ರಿಕೆಟಿಗನೊಬ್ಬ ಭಂಡಾರಿ ಅವರ ಬಳಿ ಬಂದು ತಾನು ಏಕ ಆಯ್ಕೆಯಾಗಲಿಲ್ಲ ಎಂದು ಪ್ರಶ್ನಿಸಿದನಂತೆ. ನಂತರ ಆತನು ಮೊದಲು ತನ್ನ ಕೈಗಳಿಂದ ಭಂಡಾರಿ ಅವರನ್ನು ಹೊಡೆಯಲಾರಂಭಿಸಿದ, ನಂತರ ಕೋಲಿನಿಂದ ಹೊಡೆದ ಎಂದು ಪೊಲೀಸ್ ಉಪಾಯುಕ್ತ ನೂಪುರ್ ಪ್ರಸಾದ್ ತಿಳಿಸಿದರು.
ಭಂಡಾರಿ ಅವರಿಂದ ಹೇಳಿಕೆ ಪಡೆಯುವ ಮೊದಲು. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಏನು ಹೇಳುತ್ತಾರೋ ನೋಡಬೇಕಿದೆ. ಭಂಡಾರಿ ಅವರಿಂದ ಹೇಳಿಕೆ ಪಡೆದ ನಂತರ ನಾವು ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ನೂಪುರ್ ಪ್ರಸಾದ್ ಹೇಳಿದರು.
