ತುಮಕೂರು ಜಿಲ್ಲೆಯಲ್ಲಿ ದೊಡ್ಡ ವಿಸ್ತೀರ್ಣದ ಕಾಡು ಭೂಮಿಗೆ “ಕಂದಾಯ ಭೂಮಿ” ಸ್ಥಾನಮಾನ ನೀಡಿದ್ದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಇದರ ವಿರುದ್ಧ ಎಸ್‌ಎಲ್‌ಪಿ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಎರಡು ವಾರ ಸಮಯ ನೀಡಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯನಕಹಳ್ಳಿಯಲ್ಲಿ ೩೨೩.೮೮ ಹೆಕ್ಟೇರ್ ವಿಸ್ತೀರ್ಣದ ರಕ್ಷಿತಾರಣ್ಯ ಪ್ರದೇಶವನ್ನು “ಕಂದಾಯ ಭೂಮಿ” ಎಂದು ಘೋಷಿಸಿ, ಅಂದಿನ ಹೆಚ್ವುವರಿ ಮುಖ್ಯ ಕಾರ್ಯದರ್ಶಿ ಮದನ ಗೋಪಾಲ್ ಡಿಸೆಂಬರ್ ೨೦೧೫ರಲ್ಲಿ ಆದೇಶ ಹೊರಡಿಸಿದ್ದರು. ಹಲವು ಗಣಿ ಉದ್ದಿಮೆಗಳಿಗೆ ಅನುಕೂಲವಾದಂತಹ ಈ ಆದೇಶವನ್ನು ವಿರೋಧಿಸಿ “ಸಮಾಜ ಪರಿವರ್ತನ” ಎಂಬ ಸರ್ಕಾರೇತರ ಸಂಘಟನೆಯು ನ್ಯಾಯಾಲಯಕ್ಕೆ ಹೋಗಿತ್ತು.
ಸರ್ವೋಚ್ಚ ನ್ಯಾಯಾಲಯವು ರಚಿಸಿದ ಕೇಂದ್ರೀಯ ಸಬಲೀಕೃತ ಸಮಿತಿಯು (ಸಿಇಸಿ) ಈ ಆದೇಶ ನಿಯಮಬಾಹಿರ ಎಂದು ತೀರ್ಮಾನಿಸಿದ ನಂತರ ರಾಜ್ಯ ಸರ್ಕಾರವು ತನ್ನ ತಪ್ಪೊಪ್ಪಿಕೊಂಡು ಆದೇಶವನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು.
೨೦೧೮ರ ಜೂನ್ ತಿಂಗಳಲ್ಲಿ ಅಂದಿನ ಹೆಚ್ಚವರಿ ಮುಖ್ಯ ಕಾರ್ಯದರ್ಶಿಗಳು ಮದನ ಗೋಪಾಲ್‌ರ ಆದೇಶವನ್ನು ರದ್ದುಗೊಳಿಸದರು. ಗಣಿಗಾರಿಕೆ ಉದ್ದಿಮೆಗಳು ಆದೇಶ ರದ್ದುಗೊಳಿಸುವಿಕೆಯ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದವು.
ಕರ್ನಾಟಕ ಅರಣ್ಯ ಕಾಯಿದೆಯಡಿ, ೧೯೯೪ರ ಆಗಸ್ಟ್ ೪ರಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಜನೇರು ವಲಯದಲ್ಲಿರುವ ಭೂಮಿಯನ್ನು “ರಕ್ಷಿತಾರಣ್ಯ” ಎಂದು ಘೋಷಿಸುವ ಪ್ರಸ್ತಾಪ ಮುಂದಿಟ್ಟಿತು. ಸರ್ವೆ ಸಂಖ್ಯೆ ೪೧, ೪೨, ೪೩ ರಲ್ಲಿರುವ ೩೨೩.೮೮ ಹೆಕ್ಟೇರ್ ವಿಸ್ತೀರ್ಣದ ಭೂಮಿಯನ್ನು “ರಕ್ಷಿತಾರಣ್ಯ” ಎಂದು ಘೋಷಿಸಿವ ಈ ಅಧಿಸೂಚನೆಯನ್ನು ೧೯೯೬ರ ಅಕ್ಟೋಬರ್ ೩೧ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.
ಸದರಿ ಭೂಮಿಯನ್ನು ಮತ್ತೆ ಕಾಡು ಪ್ರದೇಶವನ್ನಾಗಿಸಿದ ಘೋಷಣೆಯನ್ನು ೨೦೧೮ರ ನವೆಂಬರ್ ೪ರಂದು ರಾಜ್ಯದ ಉಚ್ಚ ನ್ಯಾಯಾಲಯವು ರದ್ದುಗೊಳಿಸಿತು. “ಇದರ ಅರ್ಥ, ೧೯೯೪ರಲ್ಲಿ ಹೊರಡಿಸಿದ ಅಧಿಸೂಚನೆ ಹಾಗೂ ೨೦೧೪ರಲ್ಲಿ ಇನ್ನಷ್ಟು ಸರ್ವೆ ಸಂಖ್ಯೆಗಳನ್ನು ಕಾಡು ಭೂಮಿ ಎಂದ ಆದೇಶ ಅಸಿಂಧುವಾಗಿವೆ ಎಂದು ಪರಿಸರ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಜನವರಿ ೨೪ರಂದು, ಸರ್ವೋಚ್ಚ ನ್ಯಾಯಾಲಯದಲ್ಲಿ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ತಾನು ಎಸ್‌ಎಲ್‌ಪಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರವು ತಿಳಿಸಿತು. ಸರ್ವೋಚ್ಚ ನ್ಯಾಯಾಲಯವು ರಾಜ್ಯಕ್ಕೆ ಎರಡು ವಾರ ಸಮಯ ನೀಡಿದೆ.
ಚಿತ್ರಗಳ ಕೃಪೆ: http://chikkanayakanahalli.blogspot.com/2010/05/blog-post_20.html
