ಕನ್ನಡ

ಕ್ಯಾಸನೂರು ಕಾಡಿನ ಕಾಯಿಲೆ (ಮಂಗನ ಕಾಯಿಲೆ) – ಒಂದು ಪಕ್ಷಿನೋಟ

ಫ್ಲಾವಿವೈರಸ್
ಫಾವಿವೈರಸ್ Flavivirus

ಹಂಚಿಕೆ: ಸಿಬಿನ್

ಲೇಖಕರು:

  • ಡಾ. ಕವಿತಾ ಸರವು, ಪ್ರಾಧ್ಯಾಪಕರು ಮತ್ತು ಘಟಕ ಮುಖ್ಯಸ್ಥರು, ಆಂತರಿಕ ಔಷಧಿ ವಿಭಾಗ, ಕಸ್ತೂರ್ಬಾ ವದಿಯಕೀಯ ಮಹಾವಿದ್ಯಾಲಯ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಹಾಗೂ ಮುಖ್ಯಸ್ಥರು, ಮಣಿಪಾಲ್ ಮೆಕ್‍ಗಿಲ್ ಸಾಂಕ್ರಾಮಿಕ ರೋಗಗಳ ಕೇಂದ್ರ, ಮಣಿಪಾಲ
  • ಡಾ. ಶಿಪ್ರ ರೈ, ಸಹಾಯಕ ಪ್ರಾಧ್ಯಾಪಕರು, ಆಂತರಿಕ ಔಷಧಿ ವಿಭಾಗ, ಕಸ್ತೂರ್ಬಾ ವದಿಯಕೀಯ ಮಹಾವಿದ್ಯಾಲಯ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

 

ಈ ಲೇಖನವು ಕ್ಯಾಸನೂರು ಕಾಡಿನ ಕಾಯಿಲೆಯ (Kyasanuru Forest Disease (KFD)), (ಮಂಗನ ಕಾಯಿಲೆ/ಮಂಗನ ಜ್ವರ) ಚಿಹ್ನೆಗಳು, ಲಕ್ಷಣಗಳತ್ತ ಬೆಳಕು ಚೆಲ್ಲಿ, ತಡೆಗಟ್ಟುವಿಕೆಯ ಉಪಯುಕ್ತ ಮಾಹಿತಿ ನೀಡುತ್ತದೆ.

ಕ್ಯಾಸನೂರು ಕಾಡಿನ ಕಾಯಿಲೆಗೆ (ಕೆಎಫ್‍ಡಿ), ಕ್ಯಾಸನೂರು ಕಾಡಿನ ಕಾಯಿಲೆ ವೈರಸ್ (Kyasanuru Forest Disease Virus) ಕಾರಣ. ಈ ವೈರಸ್ ಫ್ಲಾವಿವಿರಿಡೆ (Flaviviridae) ಎಂಬ ವೈರಸ್ ಕುಟುಂಬಕ್ಕೆ ಸೇರಿದೆ. ಕೆಎಫ್‍ಡಿವಿ ವೈರಸ್ ಅನ್ನು 1957 ರಲ್ಲಿ ಭಾರತದ ಕರ್ನಾಟಕ ರಾಜ್ಯದ (ಈ ಹಿಂದೆ ಮೈಸೂರು ಎಂದು ಕರೆಯಲಾಗುತ್ತಿತ್ತು) ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿನ ಈ ಕಾಯಿಲೆಗೆ ತುತ್ತಾದ ಒಂದು ಮಂಗನ ದೇಹದಲ್ಲಿ ಮೊದಲ ಬಾರಿಗೆ ಗುರುತಿಸಲಾಗಿತ್ತು. ಅಂದಿನಿಂದ ಪ್ರತೀ ವರ್ಷ 400-500 ಮನುಷ್ಯರಲ್ಲಿ ಈ ಕಾಯಿಲೆ ಕಂಡು ಬಂದ ವರದಿಯಾಗಿದೆ. ಮೊದಲ ಬಾರಿಗೆ ಈ ವೈರಸ್ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಪತ್ತೆಯಾದದ್ದರಿಂದ ಈ ಕಾಯಿಲೆಗೆ ಅದೇ ಹೆಸರು ಖಾಯಂ ಆಯಿತು. ಮಂಗಗಳ ಸಾವಿನೊಂದಿಗೆ ಈ ಕಾಯಿಲೆ ಸಂಬಂಧ ಹೊಂದಿರುವುದರಿಂದ ಇದನ್ನು “ಮಂಗನ ಕಾಯಿಲೆ/ಮಂಗನ ಜ್ವರ” ಎಂಬುದಾಗಿಯೂ ಕರೆಯುತ್ತಾರೆ.

ಹರಡುವಿಕೆ:

ಕೆಎಫ್‍ಡಿ ಕಾಯಿಲೆಯು ಸೋಂಕಿಗೊಳಗಾದ ಉಣ್ಣೆ ಹುಳು ಎಂಬ ಪರಾವಲಂಬಿ ಜೀವಿಯು ಮನುಷ್ಯನಿಗೆ ಕಚ್ಚುವುದರಿಂದ ಕೆಎಫ್‌ಡಿಯು ಮನುಷ್ಯನಿಗೆ ಹರಡುತ್ತದೆ. ಸೋಂಕಿಗೀಡಾದ ಉಣ್ಣೆ ಹುಳುಗಳು ಕಾಡಿನಲ್ಲಿನ ಮಂಗಗಳಿಗೆ ಕಚ್ಚುವುದರಿಂದ ಈ ಕಾಯಿಲೆ ಮಂಗಗಳಿಗೆ ತಗಲುತ್ತದೆ. ಸೋಂಕು ತಗಲಿದ ಮಂಗಗಳಲ್ಲಿ ಅತೀವ ಜ್ವರ ಕಂಡು ಬರುತ್ತದೆ. ಸೋಂಕಿಗೀಡಾದ ಮಂಗಗಳು ಸತ್ತಾಗ, ಅವುಗಳ ದೇಹದ ಮೇಲೆ ಹರಿದಾಡುವ ಉಣ್ಣೆ ಹುಳುಗಳು ಉದುರಿ ಬಿದ್ದು, ಆ ಸ್ಥಳವು ರೋಗವಾಹಕ ಜೀವಿಗಳ ತಾಣವಾಗಿ ಬದಲಾಗುತ್ತದೆ ಮತ್ತು ರೋಗ ಇನ್ನೂ ಹೆಚ್ಚಾಗಿ ಹರಡಲು ಕಾರಣವಾಗುತ್ತದೆ. ಈ ಜೀವಿಗಳು ಮನುಷ್ಯನನ್ನು ಕಚ್ಚಿದಾಗ ಅಥವಾ ಮನುಷ್ಯನು ಸೋಂಕು ತಗುಲಿದ ಪ್ರಾಣಿಯ ಸಂಪರ್ಕಕ್ಕೆ ಬಂದಾಗ, ಮುಖ್ಯವಾಗಿ ಕಾಯಿಲೆಗೊಳಗಾದ ಅಥವಾ ಇತ್ತೀಚೆಗೆ ಸಾವಿಗೀಡಾದ ಮಂಗಗಳ ಸಂಪರ್ಕಕ್ಕೆ ಬಂದಲ್ಲಿ ಈ ಕಾಯಿಲೆ ಮನುಷ್ಯರಿಗೆ ತಗಲುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಇದು ಹರಡುವುದಿಲ್ಲ.

ಲಕ್ಷಣಗಳು:

ಉಣ್ಣೆ ಹುಳು ಕಚ್ಚಿದ ೩-೮ ದಿನಗಳ ಕಾಲ ರೋಗದ ಯಾವುದೇ ಲಕ್ಷಣಗಳಿರುವುದಿಲ್ಲ. ಆ ಬಳಿಕ, ಹಠಾತ್ತನೆ ಕೆಎಫ್‍ಡಿ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಪ್ರಮುಖ ಲಕ್ಷಣಗಳೆಂದರೆ, ಜ್ವರ, ಚಳಿಜ್ವರ ಮತ್ತು ತಲೆನೋವು. ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ೩-೮ ದಿನಗಳಲ್ಲಿ ವಾಂತಿಯೊಂದಿಗೆ ಮೈ ಕೈನೋವು, ಜಠರ, ಕರುಳಿನ ರೋಗಲಕ್ಷಣಗಳು ಮತ್ತು ರಕ್ತಸ್ರಾವದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರೋಗಿಗಳಲ್ಲಿ ಕಡಿಮೆ ರಕ್ತದೊತ್ತಡ, ಕಡಿಮೆ ಪ್ಲೇಟೆಲೆಟ್ ಸಂಖ್ಯೆ, ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣಗಳ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳು ಕಂಡುಬರಬಹುದು.

ರೋಗ ಲಕ್ಷಣಗಳು ಕಾಣಿಸಿಕೊಂಡ ೧ರಿಂದ ೨ ವಾರಗಳ ಬಳಿಕ, ಕೆಲವು ರೋಗಿಗಳು ಯಾವುದೇ ತೊಂದರೆಯಿಲ್ಲದೆ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವು ರೋಗಿಗಳಲ್ಲಿ (೧೦-೨೦%) ಮೂರನೇ ವಾರದ ಆರಂಭದಲ್ಲಿ ದ್ವಿತೀಯ ಹಂತದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳಲ್ಲಿ ಜ್ವರ, ನರಸಂಬಂಧಿ ತೊಂದರೆಗಳಾದ ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ನ್ಯೂನತೆ ಸೇರಿವೆ. ಕೆಎಫ್‍ಡಿ ಪ್ರಕರಣಗಳಲ್ಲಿ ಸಾವು ಸಂಭವಿಸುವ ಸಾಧ್ಯತೆ ಸುಮಾರು ೩%ರಿಂದ ೫% ಆಗಿರುತ್ತದೆ.

ಕಾಯಿಲೆಗೆ ತುತ್ತಾಗುವ ಅಪಾಯ ಯಾರಿಗೆ?

ಕೆಎಫ್‍ಡಿ ಕಾಯಿಲೆಯು ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಮತ್ತು ಮಧ್ಯದ ಜಿಲ್ಲೆಗಳಿಗೆ ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿದೆ. ಆದರೂ ಇತ್ತೀಚೆಗೆ ಕೇರಳದ ವಯನಾಡು ಜಿಲ್ಲೆ ಮತು ಗೋವಾಗಳಲ್ಲಿ ಕೆಎಫ್‍ಡಿವಿ ಪತ್ತೆಯಾದ ವರದಿಯಾಗಿದೆ. ಕರ್ನಾಟಕ ರಾಜ್ಯದೊಳಗೆ ಪ್ರವಾಸ ಅಥವಾ ಉದ್ಯೋಗ ನಿಮಿತ್ತ ಗ್ರಾಮೀಣ ಕಾಡುಮೇಡು ಹಳ್ಳಿ ಅಥವಾ ಬಯಲು ಭಾಗದಲ್ಲೂ (ಉದಾ: ಬೇಟೆಗಾರರು, ಜಾನುವಾರು ಮೇಯಿಸುವವರು, ಕಾಡಿನಲ್ಲಿ ಕೆಲಸ ಮಾಡುವವರು, ರೈತರು) ಅಡ್ಡಾಡುವವರಿಗೆ ಸೋಂಕು ತಗುಲಿದ ಉಣ್ಣೆ ಹುಳುಗಳ ಸಂಪರ್ಕಕ್ಕೆ ಬರುವ ಸಾಧ್ಯತೆ ಇದ್ದು, ಸೋಂಕಿನ ಅಪಾಯ ಹೆಚ್ಚಾಗಿವೆ. ಋತುಮಾನವೂ ಸಹ ಇನ್ನೊಂದು ಪ್ರಮುಖ ಅಪಾಯಕರ ಅಂಶವಾಗಿದ್ದು ಹೆಚ್ಚಿನ ಪ್ರಕರಣಗಳು ನವಂಬರ್ ಮತ್ತು ಜೂನ್ ನಡುವಿನ ಒಣ ಋತುವಿನಲ್ಲಿ ವರದಿಯಾಗಿವೆ.

ರೋಗಪತ್ತೆ ಹೇಗೆ?

ರೋಗಿಗಳ ರಕ್ತದಲ್ಲಿ ಪಿಸಿಆರ್ ಮಾಲಿಕ್ಯುಲಾರ್ ಪರೀಕ್ಷೆಯ ಮೂಲಕ ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಮಾಡಬಹುದು. ನಂತರ, ಎನ್‍ಜೈಮ್ ಲಿಂಕ್ಡ್ ಇಮ್ಯುನೊಸೋರ್ಬೆಂಟ್ ಸೀರೊಲೊಜಿಕ್ ಅಸ್ಸೆ (ಎಲಿಸಾ) ಬಳಸಿ ಸೀರೋಲಜಿ ಪರೀಕ್ಷೆ ಮಾಡಬಹುದು. ಕೆಎಫ್‍ಡಿ ಕಾಯಿಲೆಯನ್ನು ಪತ್ತೆ ಹಚ್ಚಲು ಮಣಿಪಾಲದ ಕಸ್ತೂರ್ಬಾ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈರಾಲಜಿ ವಿಭಾಗದಲ್ಲಿಅತ್ಯಾಧುನಿಕ ಸೌಲಭ್ಯ ಲಭ್ಯವಿರುತ್ತದೆ.

ಚಿಕಿತ್ಸೆ:

ಕೆಎಫ್‍ಡಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಬೇಗನೇ ಆಸ್ಪತ್ರೆಗೆ ದಾಖಲಿಸಿ ದೇಹಾರೋಗ್ಯಕ್ಕೆ ಸಹಾಯಕವಾಗುವ ಚಿಕಿತ್ಸೆ ಒದಗಿಸುವುದು ಬಹಳ ಮುಖ್ಯ. ಸಹಾಯಕ ಚಿಕಿತ್ಸೆ ಅಂದರೆ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಮತ್ತು ರಕ್ತಸ್ರಾವದ ತೊಂದರೆ ಇರುವ ರೋಗಿಗಳಿಗೆ ವಿಶೇಷ ಮುಂಜಾಗ್ರತಾ ಕ್ರಮವಹಿಸುವುದು. ಅನಿವಾರ್ಯವಾದಾಗ ರೋಗಿಗೆ ಶೇಖರಿಸಿದ ಬಾಟಲಿ ರಕ್ತವನ್ನು ಪೂರಕವಾಗಿ ನೀಡಬೇಕಾದೀತು.

ತಡೆಗಟ್ಟುವಿಕೆ:

ಕೆಎಫ್‍ಡಿಗೆ ಲಸಿಕೆ ಲಭ್ಯವಿದ್ದು ಭಾರತದಲ್ಲಿ ಈ ರೋಗ ತಡೆಗಟ್ಟಲು ಕೆಎಫ್‍ಡಿ ವರದಿಯಾದ ಪ್ರದೇಶಗಲ್ಲಿ ಲಸಿಕೆಯನ್ನು ಬಳಸಲಾಗುತ್ತದೆ. ಹೆಚ್ಚುವರಿ ನಿಯಂತ್ರಣ ಕ್ರಮಗಳೆಂದರೆ ಕೀಟನಾಶಕಗಳನ್ನು ಬಳಸುವುದು ಮತ್ತು ಉಣ್ಣೆ ಹುಳು ಕಾಣಿಸುವ ಕಡೆ ಮುಖ ಕೈ ಹಾಗೂ ಕಾಲುಗಳನ್ನು ರಕ್ಷಿಸುವಂತಹ ಕವಚಗಳನ್ನು ಧರಿಸುವುದು.

ಕೆಎಫ್‌ಡಿ ರೋಗ ತಡೆಗಟ್ಟಲು ಏನು ಮಾಡಬೇಕು ಮತ್ತು ಏನು ಮಾಡಬಾರದು:

ಮಾಡಬೇಕಾಗಿರುವುದು:

  • ಮಂಗಗಳು ಸಾವಿಗೀಡಾದಲ್ಲಿ ಪಶುವೈದ್ಯಾಲಯ ವಿಭಾಗ/ಅರಣ್ಯ ಅಧಿಕಾರಿಗಳು ಮತ್ತು/ಅಥವಾ ಅರೋಗ್ಯ ವಿಭಾಗ ಅಥವಾ ಆರೋಗ್ಯ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು.
  • ಅರಣ್ಯಗಳಿಗೆ ಭೇಟಿ ನೀಡುವವರು/ಅರಣ್ಯದಲ್ಲಿ ಕೆಲಸ ಮಾಡುವವರು ತಮ್ಮ ಇಡೀ ದೇಹವನ್ನು ರಕ್ಷಣಾತ್ಮಕ ಬಟ್ಟೆಬರೆ, ಗ್ಲೌಸ್, ಬೂಟ್ಸ್ ಇತ್ಯಾದಿಗಳನ್ನು ಧರಿಸಬೇಕು.
  • ಅರಣ್ಯಕ್ಕೆ ತೆರಳುವ ಮೊದಲು ಮುಚ್ಚದೇ ಇರುವ ದೇಹದ ಭಾಗಗಳಿಗೆ ಕೀಟಾಣುಗಳನ್ನು ಓಡಿಸುವ ಡಿಎಂಪಿಯಂಥ ತೈಲವನ್ನು ಹಚ್ಚಿಕೊಳ್ಳಬೇಕು.
  • ಅರಣ್ಯದಿಂದ ಹಿಂದಿರುಗಿದ ಬಳಿಕ ಬಿಸಿ ನೀರು ಮತ್ತು ಸೋಪಿನಿಂದ ಬಟ್ಟೆಬರೆಗಳನ್ನು ತೊಳೆದು ಸರಿಯಾಗಿ ಸ್ನಾನ ಮಾಡಬೇಕು.
  • ವಿಪರೀತ ಜ್ವರದೊಂದಿಗೆ ತಲೆನೋವು ಮತ್ತು ಮೈಕೈನೋವಿದ್ದಲ್ಲಿ/ಅದರಿಂದ ಸಾವು ಸಂಭವಿಸಿದಲ್ಲಿ ಸಮೀಪದ ಆರೋಗ್ಯ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.
  • ಮಂಗಗಳು ಸಾವಿಗೀಡಾಗಿರುವ ಅರಣ್ಯಕ್ಕೆ ಹೋಗದಂತೆ ಗ್ರಾಮಸ್ಥರಿಗೆ ತಿಳಿಹೇಳಬೇಕು.
  • ಗ್ರಾಮಗಳಲ್ಲಿ ಅಥವಾ ಕೆಎಫ್‍ಡಿ ಬಾಧಿತ ಪ್ರದೇಶಗಳಲ್ಲಿ, ತಕ್ಷಣವೇ ಚಿಕಿತ್ಸೆ ಅಗತ್ಯವಿರುವ ಯಾವುದೇ ಗಂಭೀರ ಪ್ರಕರಣಗಳು ಸಂಭವಿಸಿದಲ್ಲಿ ಆರೋಗ್ಯ ಪ್ರಾಧಿಕಾರ ಅಥವಾ ವಿಭಾಗ, ಸರಕಾರಿ ಆಸ್ಪತ್ರೆಗಳು ಅಥವಾ ಖಾಸಗಿ ಆಸ್ಪತ್ರೆಗಳ ಗಮನಕ್ಕೆ ತರಬೇಕು.
  • ಜಾನುವಾರು ಮತ್ತು ಸಾಕುಪ್ರಾಣಿಗಳಲ್ಲಿ ಚರ್ಮದಲ್ಲಿ ನೆಲೆಸುವ ಪರೋಪಜೀವಿಗಳನ್ನು ನಿಯಂತ್ರಿಸುವುದರಿಂದ ಪರೋಪಜೀವಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಮಾಡಬಾರದ್ದು:

  • ಜಾನುವಾರುಗಳ ಕೊಟ್ಟಿಗೆಯ ನೆಲದಲ್ಲಿ ಹರಡಲು ಕೆಎಫ್‍ಡಿ ಬಾಧಿತ ಪ್ರದೇಶಗಳಲ್ಲಿನ ಮರಗಳ ಎಲೆಗಳನ್ನು ತರಬೇಡಿ.
  • ಇತ್ತೀಚೆಗೆ ಮಂಗಗಳು ಸಾವಿಗೀಡಾದ ಪ್ರದೇಶಕ್ಕೆ ಭೇಟಿ ಕೊಡಲೇಬೇಡಿ, ವಿಶೇಷವಾಗಿ ಈ ಹಿಂದೆ ಕೆಎಫ್‍ಡಿ ಪ್ರಕರಣ ವರದಿಯಾಗಿರುವ ಪ್ರದೇಶಕ್ಕೆ ಹೋಗಲೇಬೇಡಿ.
  • ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸದೆ ಬರಿ ಕೈಯಿಂದ, ಸೋಂಕಿಗೊಳಪಟ್ಟು ಸತ್ತ ಮಂಗನ ದೇಹವನ್ನು ಮುಟ್ಟಲೇಬೇಡಿ.

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us