ನವದೆಹಲಿ: ವೊಡಾಫೋನ್ ಐಡಿಯಾ ಕಂಪೆನಿ ತನ್ನ ಪೋಸ್ಟ್ ಪೇಯ್ಡ್ ಮತ್ತು ಪ್ರೀ ಪೇಯ್ಡ್ ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದೆ. ಡಿಸೆಂಬರ್ 01ರಿಂದ ವೊಡಾಫೋನ್ ಐಡಿಯಾ ಕನೆಕ್ಷನ್ ನಿಂದ ನೀವು ಮಾಡುವ ಕರೆಗಳು, ಎಸ್.ಎಂ.ಎಸ್. ಸಂದೇಶಗಳು ಮತ್ತು ಇಂಟರ್ನೆಟ್ ಪ್ಯಾಕ್ ದರಗಳ ವೆಚ್ಚ ದುಬಾರಿಯಾಗಲಿವೆ.
‘ಟೆಲಿಕಾಂ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಒತ್ತಡ ಎಲ್ಲಾ ಮೊಬೈಲ್ ಕಂಪೆನಿಗಳ ಪರಿಸ್ಥಿತಿಯನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕಾರ್ಯದರ್ಶಿಗಳ ಮಂಡಳಿಯೊಂದು ಈ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ತನ್ನ ಗ್ರಾಹಕರಿಗೆ ವಿಶ್ವದರ್ಜೆಯ ಡಿಜಿಟಲ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ವೊಡಾಫೋನ್ ಐಡಿಯಾ ಕಂಪೆನಿಯು ತನ್ನ ಟಾರಿಫ್ ದರಗಳನ್ನು ಇದೇ ಡಿಸೆಂಬರ್ 01ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಲಿದೆ’ ಎಂದು ಕಂಪೆನಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ವೊಡಾಫೋನ್ ಐಡಿಯಾ ಸಂಸ್ಥೆಯು ಸರಕಾರಕ್ಕೆ ತನ್ನ ಎಜಿಆರ್ – ಬಾಬ್ತಿನ 44,200 ಕೋಟಿ ರೂಪಾಯಿ ಬಾಕಿ ಪಾವತಿ ಮಾಡಬೇಕಿದೆ. ಮತ್ತು ಈ ಮೊತ್ತ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದ್ದು ಅದು ಕಂಪೆನಿಯ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೊಡಾಫೋನ್ ಸಂಸ್ಥೆಯ ಸ್ಥಿತಿ ಉತ್ತಮವಾಗೇನೂ ಇಲ್ಲ ಎಂದು ಅದರ ಸಿಇಒ ನಿಕ್ ರೀಡ್ ಅವರು ತಿಳಿಸಿದ್ದಾರೆ ಮತ್ತು ಉತ್ತಮ ಪರಿಹಾರ ಸಾಧ್ಯತೆಯೊಂದು ಲಭ್ಯವಾಗದೇ ಇದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದೆಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
