ಲೇಖಕರು: ಶ್ರೀಹರ್ಷ ಹೆಗ್ಡೆ
ಕರ್ನಾಟಕ ಸರಕಾರದ ಪರವಾಗಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್‍ರವರಿಗೆ ಶಿವಮೊಗ್ಗದಿಂದ ಶೃಂಗೇರಿಯವರೆಗೆ ಹೊಸತಾಗಿ ರೈಲ್ವೆ ಹಳಿಗಳನ್ನ ವಿಸ್ತರಿಸುವಂತೆ ಆಗ್ರಹಪೂರ್ವ ಮನವಿ ಮಾಡಿರುವುದನ್ನ ಕೇಳಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಪರಿಸರ ಪ್ರೇಮಿಗಳಿಗೆ ಅಘಾತವಾಗಿದೆ. ನಿತ್ಯ ಹರಿದ್ವರ್ಣ ಕಾಡುಗಳನ್ನ ಹೊತ್ತು ಹೊದ್ದಿದ್ದ ಮಲೆನಾಡಿನ ಈ ಭಾಗ ಈಗಾಗಲೆ ನಾಲ್ಕು ಅಣೆಕಟ್ಟುಗಳ, ಮೈಸೂರು ಕಾಗದ ಕಾರ್ಖಾನೆಯ ಅಕೇಶಿಯ ನಡುತೋಪುಗಳ ಹಾಗೂ ಕೆಲವು ಸ್ಥಳಿಯ ಪಟ್ಟಭದ್ರರ ಅತಿಕ್ರಮಣಗಳ ಹೊರತಾಗಿಯೂ ಇನ್ನೂ ಚೂರುಪಾರಾದರೂ ಉಸಿರುಳಿಸಿಕೊಂಡಿದೆ. ಅಂತಹದ್ದರಲ್ಲಿ ಈಗ ರಾಜ್ಯ ಸರಕಾರವೆ ಉಪಾಯವಾಗಿ ಕೆಲವು ರಾಜಕಾರಣಿಗಳ ಜೋಳಿಗೆ ತುಂಬುವ ದುರುದ್ದೇಶದಿಂದ ಜನೋಪಯೋಗಿ ಕಾರ್ಯಕ್ರಮದ ಮುಸುಕಿನಲ್ಲಿ ಈ ಪ್ರಸ್ತಾವಿತ ಯೋಜನೆಯ ಮೂಲಕ ಪಶ್ಚಿಮಘಟ್ಟದ ಅಳಿದುಳಿದ ಅನನ್ಯತೆಯನ್ನ ಕುಲಗೆಡಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ಯಾವುದೆ ಜನೋಪಯೋಗಿ ಯೋಜನೆಗಳೂ ಸಹ ಸ್ಥಳಿಯರ ಆಗ್ರಹದ ಹಾಗೂ ಹಿತಾಸಕ್ತಿಯ ಆಧಾರದ ಮೇಲೆ ಮಂಜೂರಾಗಬೇಕೆ ವಿನಃ: ಯಾವುದೋ ಭ್ರಷ್ಟ ರಾಜಕಾರಣಿಯ ಕಳ್ಳ ಖಜಾನೆ ತುಂಬಿಸುವ ಕಾರಣಕ್ಕಲ್ಲ. ಸ್ಥಳಿಯ ತೀರ್ಥಹಳ್ಳಿ, ನರಸಿಂಹರಾಜಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳ ಮಂದಿ ರೈಲ್ವೆಯ ಸೇವೆಯನ್ನ ಬಯಸುತ್ತಲೂ ಇಲ್ಲ – ಅವರಿಗೆ ಅದರ ಅಗತ್ಯ ಸಹ ಸದ್ಯಕ್ಕಿಲ್ಲ. ಅಂತಹದ್ದರಲ್ಲಿ ಒತ್ತಾಯಪೂರ್ವಕವಾಗಿ ಅಂತಹ ವಿನಾಶಕಾರಿ ಯೋಜನೆಯನ್ನ ಆ ಪ್ರದೇಶದ ಮೇಲೆ ಹೇರುವ ಮಾನ್ಯ ಮುಖ್ಯಮಂತ್ರಿಯವರ ಕುತಂತ್ರದ ಒಳಮರ್ಮವಾದರೂ ಏನು? ಈಗಾಗಲೆ ತುಂಗಾ ಮೇಲ್ದಂಡೆ ಯೋಜನೆ, ಭದ್ರಾ ಬಲದಂಡೆ ಹಾಗೂ ಮೇಲ್ದಂಡೆ ಯೋಜನೆಗಳ ಹೆಸರಿನಲ್ಲಿ ತೀರ್ಥಹಳ್ಳಿ ಹಾಗೂ ನರಸಿಂಹರಾಜಪುರ ತಾಲ್ಲೂಕುಗಳನ್ನ ಒಂದು ಹಂತಕ್ಕೆ ಆಳುವ ಭಂಡರು ಬರಡು ಮಾಡಿ ಮುಳುಗಿಸಿ ಸಹ ಹಾಕಿದ್ದಾರೆ. ಒಂದೊಮ್ಮೆ ಈ ಮನೆಗೆ ಮಾರಿಯಾದ ಪ್ರಸ್ತಾವಿತ ಯೋಜನೆ ಸಾಕಾರಗೊಂಡರೂ ಸಹ ತುಂಬಾ ಸಮೀಪದ ಮಾರ್ಗ ಶಿವಮೊಗ್ಗದಿಂದ ನರಸಿಂಹರಾಜಪುರ – ಕೊಪ್ಪ – ಶೃಂಗೇರಿ ಮಾರ್ಗವಾಗಿಯೆ ಸಾಗಬೇಕು. ಅದನ್ನ ಹೊರತು ಪಡಿಸಿದರೆ ಮಂಡಗದ್ದೆ – ತೀರ್ಥಹಳ್ಳಿ – ಮೇಗರವಳ್ಳಿ – ಆಗುಂಬೆ – ಬಿದರಗೋಡು ಮಾರ್ಗವಾಗಿಯೇ ಶೃಂಗೇರಿಯನ್ನ ಶಿವಮೊಗ್ಗದೊಂದಿಗೆ ಬೆಸೆಯಬೇಕು. ಹೋಲಿಕೆಯಲ್ಲಿ ಈ ಮಾರ್ಗ ಸರಿಸುಮಾರು ಮೂವತ್ತು ಕಿಲೋಮೀಟರ್ ಹೆಚ್ಚಾಗುತ್ತದೆ. ಮೇಲಿನ ಎರಡು ಮಾರ್ಗಗಳಲ್ಲಿ ಯಾವ ಮಾರ್ಗದ ಮೂಲಕ ಇದು ಸಾಗಿದರೂ ಮಲೆನಾಡಿನ ಸಹಜ ಸಮೃದ್ಧ ಲಕ್ಷಾಂತರ ಮರಗಳಿಗೆ ಕುತ್ತು ಕಟ್ಟಿಟ್ಟ ಬುತ್ತಿ.
ಇಂತಹ ವಿನಾಶಕಾರಿ ಯೋಜನೆಗಳ ಮೂಲಕ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯನ್ನ ಬಯಲು ಸೀಮೆಯ ಚಿಕ್ಕಬಳ್ಳಾಪುರದ ಮಟ್ಟಿಗೆ ಬರಡಾಗಿಸಲು ಹೊರಟಿರುವ ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ಏನಾದರೂ ಇದ್ದರೆ ಕೂಡಲೆ ಇಂತಹ ಮನೆಹಾಳ ಯೋಜನೆಯನ್ನ ನಿಲ್ಲಿಸಬೇಕು. ಅಷ್ಟಕ್ಕೂ ಶೃಂಗೇರಿಯೇನೂ ತೀರದ ಜನಜಂಗುಳಿಯಿಂದ ಗಿಜಿಗಿಜಿಗುಡುವ ಬೃಹತ್ ನಗರವಲ್ಲ. ಶ್ರೀಶಾರದಾ ದಕ್ಷಿಣಾಮ್ನಾಯ ಪೀಠದ ಮಠ ಅಲ್ಲಿ ಇರದಿದ್ದ ಪಕ್ಷದಲ್ಲಿ: ಅಲ್ಲಿ ಜನ ಜಂಗುಳಿ ಸೇರುತ್ತಿದ್ದುದೇ ಅನುಮಾನ. ಈ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕೂಡಾ ನವರಾತ್ರಿ ಹಾಗೂ ಕೆಲವು ಆಯ್ದ ವಿಶೇಷ ದಿನಗಳ ಹೊರತು ಅತಿ ವಿರಳ. ರಾಜ್ಯದ ಯಾತ್ರಾರ್ಥಿಗಳ ಒತ್ತಡ ಅಧಿಕವಾಗಿರುವ ಶ್ರೀ ಕುಕ್ಕೆ ಸುಬ್ರಮಣ್ಯಕ್ಕೆ ವಾರ್ಷಿಕ ಭೇಟಿ ನೀಡುವ ಶೇಕಡಾ ನಲವತ್ತರಷ್ಟೂ ಯಾತ್ರಾರ್ಥಿಗಳು ಶೃಂಗೇರಿಯ ಶಾರದೆಯನ್ನ ದರ್ಷಿಸುವುದಿಲ್ಲ. ಧರ್ಮಸ್ಥಳ ಹಾಗೂ ಕೊಲ್ಲೂರಿನ ಹೋಲಿಕೆಯಲ್ಲಿ ಅರ್ಧದಷ್ಟೂ ಇಲ್ಲಿ ಭಕ್ತಾದಿಗಳು ಭೇಟಿ ನೀಡುವುದಿಲ್ಲ.
ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಕೆರೆಕಟ್ಟೆ, ಆಗುಂಬೆ, ಕಲ್ಮನೆ, ಕೊಪ್ಪ ಹಾಗೂ ಬಾಳೆಹೊನ್ನೂರು ರಸ್ತೆ ಮಾರ್ಗಗಳು ಅಷ್ಟು ಪ್ರಮಾಣದ ಪ್ರವಾಸಿಗರ ಸುಸೂತ್ರ ನಿಭಾವಣೆಗೆ ಧಾರಾಳವಾಗಿ ಸಾಕು. ಅವುಗಳನ್ನ ಸುಸ್ಥಿತಿಯಲ್ಲಿಟ್ಟುಕೊಂಡರೆ ಇನ್ನೂ ಅರ್ಧ ಶತಮಾನ ಅವು ಭಕ್ತಾಧಿಗಳ ಒತ್ತಡವನ್ನ ನಿರಾಯಾಸವಾಗಿ ನಿಭಾಯಿಸಬಲ್ಲವು. ಅಂತಹದ್ದರಲ್ಲಿ ಈ ಹೊಸತಾದ ಅನಗತ್ಯ ರೈಲ್ವೆ ಮಾರ್ಗದ ಹೇರಿಕೆಯ ಅಗತ್ಯವಾದರೂ ಏನಿದೆ? ಮಲೆನಾಡಿನ ಬಗ್ಗೆ ಹಾಗೂ ಅದರ ಅಸ್ತಿತ್ವದ ಮಹತ್ವದ ಬಗ್ಗೆ ಅರಿವಿರುವ ಪ್ರತಿಯೊಬ್ಬರೂ ಯೋಚಿಸಬೇಕಾದ ಸಂಗತಿ ಇದಾಗಿದ್ದು, ರಾಜ್ಯ ಸರಕಾರದ ಇಂತಹ ಮಾರಕ ಅಭಿವೃದ್ಧಿಯ ಮಾದರಿಗಳನ್ನ ನಾವೆಲ್ಲರೂ ಸಂಘಟಿತರಾಗಿ ವಿರೋಧಿಸದಿದ್ದಲ್ಲಿ ಖಂಡಿತ ಪಶ್ಚಿಮ ಘಟ್ಟಕ್ಕೆ ಉಳಿವಿರೋಲ್ಲ. ಅಳಿಯುವ ಮೊದಲು ಜಾಗೃತರಾಗೋಣ. ಮಾನ್ಯ ಹೆಚ್ ಡಿ ಕುಮಾರಸ್ವಾಮಿಯವರೆ ದಯವಿಟ್ಟು ಇಂತಹ ಹುಚ್ಚಾಟ ನಿಲ್ಲಿಸಿ, ಪ್ರಬುದ್ಧರಾಗಿ.
