ಭಾರತೀಯ ಸರ್ವೋಚ್ಚ ನ್ಯಾಯಾಲಯವು ತನ್ನ ಮಾಜಿ ನ್ಯಾಯಾಧೀಶ ನ್ಯಾಯಮುರ್ತಿ ಡಿ ಕೆ ಜೈನ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಮೊಟ್ಟಮೊದಲ ಸಾರ್ವಜನಿಕ ತನಿಖಾಧಿಕಾರಿ (ಆಂಬಡ್ಸ್‌ಮನ್) ಆಗಿ ನೇಮಿಸಿದೆ.
“ನ್ಯಾಯಮೂರ್ತಿ ಡಿ ಕೆ ಜೈನ್ ಅವರ ಹೆಸರನ್ನು ಎಲ್ಲಾ ಸಂಬಂಧಿತ ಪಕ್ಷಗಳು ಒಪ್ಪಿಕೊಂಡಿರುವುದರಿಂದ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ” ಎಂದು ನ್ಯಾಯಮೂರ್ತಿ ಎಸ್ ಎ ಬೋಬಡೆ ನೇತೃತ್ವದ, ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಅವರನ್ನು ಒಳಗೊಂಡ ಇಬ್ಬರು ಸದಸ್ಯರ ಪೀಠವು ಹೇಳಿತು.
ಹೊಸದಾಗಿ ನೇಮಿತವಾದ ಆಂಬಡ್ಸ್‌ಮನ್ ನ್ಯಾ. ಡಿ ಕೆ ಜೈನ್ ಆದಷ್ಟು ಬೇಗ ತಮ್ಮ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪೀಠವು ತಿಳಿಸಿತು.
ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಘಗಳ ನಡುವಿನ ಭಿನ್ನಾಭಿಪ್ರಾಯಗಳು, ಹಾಗೂ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ ಎಲ್ ರಾಹುಲ್ ವಿವಾದದ ತನಿಖೆಯ ಮೇಲ್ವಿಚಾರಣೆಯನ್ನು ನ್ಯಾ. ಡಿ ಕೆ ಜೈನ್ ನಡೆಸಲಿದ್ದಾರೆ.
ತನ್ನ ಹಿಂದಿನ ವಿಚಾರಣೆಯಲ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕೆ ಎಲ್ ರಾಹುಲ್ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ವಿವಾದಿತ ಹೇಳಿಕೆಯ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ತನಗೆ ನೆರವಾಗಲು ಹಿರಿಯ ವಕೀಲ ಪಿ ಎಸ್ ನರಸಿಂಹ ಅವರನ್ನು ನೇಮಿಸಿತು.
