ಬೆಂಗಳೂರು : ಮಾರಕವಾಗುತ್ತಿರುವ ಪೀಣ್ಯ ಕೈಗಾರಿಕಾ ಮಾಲಿನ್ಯ
ಸುಮಾರು ಮೂರು-ನಾಲ್ಕು ದಶಕಗಳಿಂದ ಪೀಣ್ಯ ಕೈಗಾರಿಕಾ ಬಡಾವಣೆಯು ತೀವ್ರ ಗತಿಯಲ್ಲಿ ಬೆಳೆದು ಏಷ್ಯಾದಲ್ಲಿ ಅತಿ ದೊಡ್ಡ ಕೈಗಾರಿಕಾ ಬಡಾವಣೆಗಳಲ್ಲಿ ಒಂದಾಗಿದೆ. ಬೆಂಗಳೂರು ನಗರದ ವಾಯವ್ಯ ಹೊರವಲಯದಲ್ಲಿರುವ ಪೀಣ್ಯ ಕೈಗಾರಿಕಾ ಬಡಾವಣೆಯಲ್ಲಿ ಸುಮಾರು ೨೦,೦೦೦ಕ್ಕೂ ಹೆಚ್ಚು ವಿವಿಧ ಗಾತ್ರದ ಉದ್ದಿಮೆಗಳಿವೆ.
ಪೀಣ್ಯ ಕೈಗಾರಿಕಾ ಬಡಾವಣೆ ಬೆಳೆಯುವುದರೊಂದಿಗೆ ಅದರೊಟ್ಟಿಗೆ ಹಲವು ಸಮಸ್ಯೆಗಳೂ ಹುಟ್ಟಿಕೊಂಡವು. ವಾಯು, ಜಲ ಹಾಗು ಮಣ್ಣಿನ ಮಾಲಿನ್ಯ ಸೇರಿದಂತೆ ನಾನಾ ಸಮಸ್ಯೆಗಳುಂಟಾದವು.
ಪೀಣ್ಯ ಕೈಗಾರಿಕೆಗಳಿಂದ ಹೊರಸೂಸುವ ನಾನಾ ರೀತಿಯ ತ್ಯಾಜ್ಯ ದ್ರವಗಳು ಬಡಾವಣೆಯ ಸುತ್ತಮುತ್ತಲ ಕೆರೆಯ ನೀರೊಂದಿಗೆ ಬೆರೆತು ಕೆರಗಳನ್ನು ಕಲುಷಿತಗೊಳಿಸಲಾರಂಭಿಸಿದವು. ಪೀಣ್ಯದಿಂದ ಅನತಿ ದೂರದಲ್ಲಿರುವ ಬೈರಮಂಗಲ ಜಲಾಶಯದಲ್ಲಿನ ನೀರು ತೀವ್ರವಾಗಿ ಕಲುಷಿತಗೊಂಡಿದೆ. ಬೈರಮಂಗಲದ ಸುತ್ತಮುತ್ತಲ ಬಡಾವಣೆಗಳ (ಬನ್ನಿಗಿರಿ, ಚೌಕಹಳ್ಳಿ, ಕೆ. ಗೋಪಹಳ್ಳಿ ಮತ್ತು ಇತರೆ ಹಳ್ಳಿಗಳು) ನಿವಾಸಿಗಳು ಅರ್ಬುದರೋಗ (ಕ್ಯಾನ್ಸರ್) ಹಾಗೂ ಚರ್ಮ ರೋಗದಿಂದ ಬಳಲುತ್ತಿದ್ದಾರೆ. ಕೆಲವರು ಈ ರೋಗಕ್ಕೆ ಬಲಿಯಾಗಿದ್ದೂ ಉಂಟು.
ಈ ಕ್ಷೇತ್ರದಲ್ಲಿರುವ ಕೆರೆಗಳಲ್ಲಿ ಕರಗದಿರುವಂತಹ ರಾಸಾಯನಿಕಗಳು ಹಾಗೂ ಕೈಗಾರಿಕಾ ತ್ಯಾಜ್ಯ ಮಿತಿಯನ್ನೂ ಮೀರುವಂತಹ ಭಾರ ಲೋಹಗಳಿಂದ ಕೂಡಿದೆ. “ಇಲ್ಲಿರುವ ಕೈಗಾರಿಕೆಗಳಲ್ಲಿ ಬಹಳಷ್ಟವುಗಳು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಿಕೊಂಡಿಲ್ಲ” ಎಂದು ತಜ್ಞ್ರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕ್ಷೇತ್ರದ ಕೆರೆಗಳಲ್ಲರುವ “ಫೀಕಲ್ ಕೊಲಿಫಾರ್ಮ್” ವಾಯುಮಾಲಿನ್ಯ ನಿಯಂತ್ರಣಾ ಮಂಡಳಿ ನಿಗಧಿಪಡಿಸಿದಕ್ಕಿಂತಲೂ ೧೦೦ ಪಟ್ಟು ಹೆಚ್ಚಾಗಿದೆ ಎಂದು ಇನ್ನೊಬ್ಬ ತಜ್ಞರು ತಿಳಿಸಿದರು. ಈ ಬ್ಯಾಕ್ಟೀರಿಯದಿಂದ ಹಲವರಿಗೆ ಕಾಯಿಲೆಗಳು ಬಂದಿದ್ದುಂಟು. ಕೆರೆಯ ನೀರು ಕಲುಷಿತಗೊಂಡಿರುವ ಕಾರಣ ಇಡೀ ವರ್ಷ ಅವು ನೊರೆಯುತ್ತಿರುತ್ತವೆ. ಮಳೆಗಾಲದಲ್ಲಿ ನೊರೆಯು ಉಲ್ಬಣಗೊಂಡು ಸುತ್ತ ಮುತ್ತ ವಾಸಿಸುವವರಿಗೆ ನಾನಾ ರೀತಿಯ ತೊಂದರೆಗಳುಂಟಾಗುತ್ತಿವೆ. ಸರ್ಕಾರದವರಿಗೆ ಅನೇಕ ಬಾರಿ ಈ ಸಮಸ್ಯೆಯ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಲ್ಲಿನ ಗ್ರಾಮ ಪಂಚಾಯತ ಸದಸ್ಯರೊಬ್ಬರು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಮಾಹಿತಿಯ ಪ್ರಕಾರ ಲಘು ಪ್ರಮಾಣದ ಕೈಗಾರಿಕೆಗಳೇ ಹೆಚ್ಚಾಗಿ ನಿಯಮಗಳನ್ನು ಉಲ್ಲಂಘಿಸುವುದು. ತ್ಯಾಜ್ಯ ಸಂಸ್ಕರಣಾ ಶುಲ್ಕ ಪಾವತಿಸಲಾಗದೆ ಈ ಕೈಗಾರಿಕೆಗಳು ಕದ್ದು ಮುಚ್ಚಿ ತ್ಯಾಜ್ಯಗಳನ್ನು ಕೆರೆಗೆ ಚೆಲ್ಲುತ್ತವೆ..ಸುತ್ತಮುತ್ತಲ ಹೊಲಗದ್ದೆಗಳಲ್ಲಿಯೂ ಸಹ ಸಮಸ್ಯೆಯು ತಲೆಯೊಡ್ಡಿದೆ. ಗದ್ದೆಗೆ ಬಂದ ಕಲುಷಿತ ನೀರಿನಿಂದಾಗಿ ರೈತರ ಕಾಲುಗಳಲ್ಲಿ ವ್ರಣಗಳೆದ್ದಿವೆ.
ಲಘು ಕೈಗಾರಿಕೆಗಳು ಕೆರೆಗಳಲ್ಲಿ ತ್ಯಾಜ್ಯ ಬಿಡುವುದನ್ನು ತಡೆಗಟ್ಟುವ ಉದ್ದೇಶದಿಂದ, ಜುಲೈತಿಂಗಳಲ್ಲಿ ಪೀಣ್ಯ ಕೈಗಾರಿಕಾ ಸಂಘವು ತಮ್ಮ ಸದಸ್ಯರಿಂದ ಹಣ ಸಂಗ್ರಹಿಸಿ ಸರ್ಕಾರದಿಂದ ಅನುದಾನಿತ ೧೦ ಕೋಟಿರೂಪಾಯಿಗಳ ಜೊತೆಗೆ ಸೇರಿಸಿ ಆ ಬಡಾವಣೆಯಲ್ಲೇ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿತು. ಇದು ಕಾರ್ಯಾರಂಭಗೊಂಡಲ್ಲಿ ತ್ಯಾಜ್ಯ ಸಂಸ್ಕರಣಾ ವೆಚ್ಚವು ಕಡಿಮೆಯಾಗುವುದು ಎಂಬುದು ಸಂಘದ ಅಭಿಪ್ರಾಯ. ಆದಾಗ್ಯೂ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯಲ್ಲಿ ಜನ ಪ್ರತಿನಿಧಿಗಳಿದ್ದರೆ ಮಾತ್ರ ಈ ಸಮಸ್ಯೆಯು ತಕ್ಕಮಟ್ಟಿಗೆ ಪರಿಹಾರವಾಗುವುದು ಎಂದು ತಜ್ಞರು ಹೇಳುತ್ತಾರೆ.
