ಭಾರತದ ವಿರುದ್ಧ ಪರಮಾಣು ಮತ್ತು ಮುಸ್ಲಿಮ್ ದಾಳ ಪ್ರಯೋಗಿಸಿದಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ವಾಗ್ಧಾಳಿ ನಡೆಸಿದರು.
“ಇಮ್ರಾನ್ ಖಾನ್ ತಮ್ಮ ಸಂಸತ್ತಿನಲ್ಲಿ ವಿಚಿತ್ರವಾಗಿ ಮಾತನಾಡುತ್ತಾರೆ. ನಮ್ಮಲ್ಲಿ ಅಣು ಬಾಂಬ್ ಇದೆ ಎನ್ನುತ್ತಾರೆ. ಇವು ನಮ್ಮಲ್ಲೂ ಇವೆಯಲ್ಲವೇ?” ಎಂದು ಒವೈಸಿ ಹೇಳಿದರು.
ಭಾರತದತ್ತ ಬೆರಳು ತೋರಿಸಲು ಮುಸ್ಲಿಮ್ ರಾಜಕೀಯ ಬಳಸಬಾರದು ಎಂದು ಇಮ್ರಾನ್ ಖಾನ್‌ರಿಗೆ ಒವೈಸಿ ಕಿವಿಮಾತು ಹೇಳಿದರು.
“ಈ ದೇಶದ ಮುಸ್ಲಿಮರು ನಿಮಗಿಂತಲೂ ಪ್ರಜ್ಞಾವಂತರು. ನಿಮ್ಮ ಲಷ್ಕರ್-ಎ-ಷೈತಾನ್ ಮತ್ತು ಜೈಷ್-ಎ-ಷೈತಾನ್ ಇವನ್ನು ಮೊದಲು ನಿಯಂತ್ರಣದಲ್ಲಿಟ್ಟುಕೊಳ್ಳಿ” ಎಂದು ಒವೈಸಿ ಹೇಳಿದರು.
ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ, ಭಯೋತ್ಪಾದಕ ಮಸೂದ್ ಅಜರ್ ಒಬ್ಬ ಮೌಲಾನಾ ಅಲ್ಲ, ಬದಲಿಗೆ ಒಬ್ಬ ಸೈತಾನನ ನಾಯಿ, ಅವನು ಒಬ್ಬ ನರಹಂತಕ” ಎಂದು ಬಯ್ದರು.
“ಬಾಂಬ್ ಸಿಡಿಸುವುದು, ಜನರನ್ನು ಹತ್ಯೆ ಮಾಡುವುದು – ಇಸ್ಲಾಮ್ ಇವನ್ನೆಲ್ಲ ಒಪ್ಪುವುದಿಲ್ಲ. ನಮ್ಮ ದೇಶದ ಶತ್ರುಗಳೇ ಇಲ್ಲಿನ ಮುಸ್ಲಿಮರ ಶತ್ರುಗಳು ಎಂದು ಒವೈಸಿ ಹೇಳಿದರು.
ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ವರ್ತಮಾನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಬಗ್ಗೆ ಒವೈಸಿ ಸಂತಸ ವ್ಯಕ್ತಪಡಿಸಿದರು.
“ಸರ್ಕಾರ ಜೈಷ್ ಭಯೋತ್ಪಾದಕ ಶಿಬಿರಗಳ ಮೇಲೆ ಧಾಳಿ ಮಾಡಿದ್ದನ್ನು ನಾವು ಶ್ಲಾಘಿಸುತ್ತೇವೆ. ಆದರೆ ಪುಲ್ವಾಮಾದಲ್ಲಿ ಭಯೋತ್ಪಾದಕರಿಗೆ ಸ್ಫೋಟಕಗಳು ಮತ್ತು ಅಮೆರಿಕನ್ ಶಸ್ತ್ರಗಳು ಹೇಗೆ ದೊರೆತವು? ಎಂಬ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು” ಎಂದರು.
