“ಮಣ್ಣಿನ ಮೊಮ್ಮಗ”ನ ಅಧಿಕಾರದಲ್ಲಿ ರೈತರ ಆತ್ಮಹತ್ಯೆ ಮುಂದುವರೆಯುತ್ತಿದೆ
ಕಳೆದ ಮೇ ತಿಂಗಳಲ್ಲಿ ಚುನಾವಣೆ ನಡೆದು, ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದ ಕಾರಣ, ಹಲವು ದಿನಗಳ ಮಾತುಕತೆಗಳ ನಂತರ ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷಗಳು ಪಾಲುದಾರರಾಗಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಜಾದಳದ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಡಾ. ಜಿ ಪರಮೇಶ್ವರ ಉಪಮುಂಖ್ಯಮಂತ್ರಿಯಾದರು.
“ಮಣ್ಣಿ ನ ಮಗ” ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ದೇಶದ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಹಿಂದೆ ರೈತರ ಹಿತಾಸಕ್ತಿಗಾಗಿ ಶ್ರಮಿಸುವುದಾಗಿ ಹೇಳಿದ್ದರು, ಹಾಗಾಗಿ ಅವರ ಪುತ್ರ “ಮಣ್ಣಿನ ಮೊಮ್ಮಗ” ಕುಮಾರಸ್ವಾಮಿ ಅವರ ಸರ್ಕಾರದ ಮೇಲೆ ರೈತರು ತಮ್ಮ ನಾನಾ ಸಮಸ್ಯೆಗಳನ್ನು ಬಗೆಹರಿಸುವರೆಂಬ ಭರವಸೆಯಿಟ್ಟಿದ್ದರು.
ರೈತರು ಬಹಳ ಹಿಂದಿನಿಂದಲೂ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಿ ಕಂಗಾಲಾಗಿದ್ದಾರೆ. ತಾವು ಬಿತ್ತುವ ಫಸಲುಗಳ ಬೀಜಗಳ ದುಬಾರಿ ಬೆಲೆ ಅಥವಾ ಕಲಬೆರಕೆ ತಳಿ, ನಾಡಿನಲ್ಲಿ ಬರ, ಫಸಲುಗಳ ವೈಫಲ್ಯದ ಕಾರಣ ಅವರು ಪಡೆದಂತಹ ಸಾಲಗಳನ್ನು ತೀರಿಸಲಾಗದೆ ಪರದಾಡುತ್ತಿದ್ದಾರೆ; ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಬೆನಲ್ಲೇ ರೈತರು ಸಾಲ ಮನ್ನಾ ಮಾಡಿ ಎಂಬ ಬೇಡಿಕೆಯಿಟ್ಟರು. ಇದಕ್ಕೆ ಸಬಲ ಕಾರಣಗಳೂ ಇದ್ದವು: ಮಳೆ ಸಾಲದಾದ ಕಾರಣ ಫಸಲುಗಳ ವೈಫಲ್ಯ, ಬೆಂಬಲ ಬೆಲೆಯ ಕುಸಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಇತ್ಯಾದಿ. ಈ ವಿಷಯವನ್ನು ಪರಿಗಣಿಸಿದ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್, ಸಾರ್ವಜನಿಕ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಗಳಿಂದ ಪಡೆದ ಸಾಲಗಳ ಮಾಹಿತಿ ಕಲೆ ಹಾಕಿತು. ಸಾಲದ ಮೊತ್ತ ಸುಮಾರು ೫೩,೦೦೦ ಕೋಟಿ ರೂಪಾಯಿಗಳು ಎಂದು ಸರ್ಕಾರ ನಿರ್ಣಯಕ್ಕೆ ಬಂದಿತು.
ರಾಜ್ಯದ ಪ್ರಮುಖ ಪಕ್ಷಗಳು ತಮ್ಮ-ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ರೈತರ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವೆವು ಎಂದು ತಿಳಿಸಿದ್ದವು. ಆದರೆ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ನುಡಿದಂತೆ ನಡೆದುಕೊಳ್ಳುವ ಯಾವುದೇ ಪ್ರಯತ್ನ ಮಾಡಿದಂತೆ ತೋರುತ್ತಿಲ್ಲ. ಸಾಲ ಮನ್ನಾ ಮಾಡಲು ಮುಂದಾದರೂ ಸಹ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿತ್ತು.
ತಮ್ಮ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಸಾಲ ಮನ್ನಾಗೆ ಕೆಲ ಷರತ್ತುಗಳನ್ನು ಸಹ ತಿಳಿಸಿದರು. ಈ ಷರತ್ತುಗಳಬಗ್ಗೆ ಆಕ್ಷೇಪವೆತ್ತಿದ ರೈತರಿಗೆ, ಸಾಲದ ಹಣ ಸದುಪಯೋಗವಾಗುತ್ತಿಲ್ಲ ಎಂಬ ಕಾರಣ ನೀಡಲಾಯಿತು.
ರೈತರಿಗೆ ವಿವಿಧ ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ನೋಟೀಸ್ ಬರಲಾರಂಭಿಸಿದವು. ಬ್ಯಾಂಕ್‌ನವರು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂಬ ಆಶ್ವಾಸನೆಯನ್ನು ರಾಜ್ಯ ಸರ್ಕಾರ ನೀಡಿದರೂ, ಬ್ಯಾಂಕ್ ನೋಟೀಸುಗಳು ರೈತರಿಗೆ ತಲುಪುವುದು ನಿಲ್ಲಲೇ ಇಲ್ಲ. ರೈತರು ಕಂಗಾಲಾದರು. ಇನ್ನೂ ಕೆಲವರು ನೇಣು ಬಿಗಿದೋ, ವಿಷ ಕುಡಿದೋ, ರೈಲಿನಡಿ ಸಿಕ್ಕೋ, ಬಾವಿಯಲ್ಲಿ ಅಥವಾ ನದಿಯಲ್ಲಿ ಧುಮುಕಿಯೋ ಆತ್ಮಹತ್ಯೆಮಾಡಿಕೊಂಡರು. ಆದರೂ ಸರ್ಕಾರ ಇದರ ತೀವ್ರ ಗಾಂಭೀರ್ಯ ಪರಿಗಣಿಸಿ ಎಚ್ಚೆತ್ತುಕೊಳ್ಳಲಿಲ್ಲ.
ಕರ್ನಾಟಕದಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಪೈಕಿ ಕಬ್ಬು ಬೆಳೆಯುವವರ ಪಾಲೇ ಅತಿ ಹೆಚ್ಚು. ಕಬ್ಬು ಬೆಳೆಗಾರರು ರೈತರ ಪೈಕಿ ಅತಿ ಸ್ಥಿತಿವಂತರು ಎನ್ನುವುದು ಭ್ರಮೆ. ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕಬ್ಬು ಪ್ರಮುಖ ಫಸಲು. ಆತ್ಮಹತ್ಯೆಗೆ ಶರಣಾದ ರೈತರ ಪೈಕಿ ಕಬ್ಬು ಬೆಳೆಗಾರರದೇ ಶೇಕಡಾ ೨೫ ರಷ್ಟು ಪಾಲು.
ಕಳೆದ ನವೆಂಬರ್ ತಿಂಗಳಲ್ಲಿ, ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡನು. ತನ್ನಲ್ಲಿದ್ದ ಚೀಟಿಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಹೊಣೆಗಾರನನ್ನಾಗಿಸಿದ್ದಾನೆ. ಸರ್ಕಾರ ಕಬ್ಬು ಬೆಳೆಗಾರರು ಹಾಗು ಸಕ್ಕರೆ ಕಾರ್ಖಾನೆ ಮಾಲೀಕರು (ಇವರಲ್ಲಿ ಬಹುಪಾಲು ರಾಜಕೀಯದವರೇ) ನಡುವೆ ಸಂಧಾನ ಮಾಡಲು ಮುಂದಾಗಿತ್ತು ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಸಕ್ಕರೆಯ ಒಂದು ಹರಳಷ್ಟೂ ಒಪ್ಪಿಕೊಳ್ಳದೆ ಮೊಂಡುತನ ಪ್ರದರ್ಶಿಸಿದರು; ಇನ್ನೂಕೆಲವರು ನಾನಾ ರೀತಿಯ ಸಬೂಬಗಳನ್ನು ನೀಡಿ ನಯವಾಗಿ ಜಾರಿಕೊಂಡರು. ಮಖ್ಯಮಂತ್ರಿಗಳ ಸಂಧಾನಸಭೆ ವಿಫಲವಾಯಿತು.
ರೈತರು ಬೆಳೆಯುವ ಫಸಲುಗಲಿಗೆ ಬೆಂಬಲ ಬೆಲೆ ನಿಗಧಿಪಡಿಸುವಲ್ಲಿ ಮೀನ ಮೇಷ ಎಣಿಸುತ್ತಿರುವುದು ದುರಂತ. ಈ ರೈತರ ಫಸಲಿಗೆ ಬೆಂಬಲ ಬೆಲೆ ಇಲ್ಲದ ಕಾರಣ ತಮ್ಮ ಜೀವನ ನಡೆಸಲು ಪರದಾಡುತ್ತಿದ್ದಾರೆ.
ಯಾವುದೇ ನಿಯಂತ್ರಣವಿಲ್ಲದೆ ನಗರೀಕರಣಕ್ಕಾಗಿ ಮರ-ಅರಣ್ಯಗಳನ್ನು ನಾಶ ಮಾಡಲಾಗುತ್ತಿದೆ. ಇದರಿಂದ ಮಳೆ ಕಡಿಮೆಯಾಗಿ ನದಿಯ ನೀರು ಬತ್ತಿ ಹೋಗುತ್ತಿವೆ. ನೀರಿನ ಅಭಾವದಲ್ಲಿ ಫಸಲುಗಳು ಬೆಳೆಯುವುದಿಲ್ಲ. ಹಲವಾರು ರೀತಿಯ ಸಾಲಗಳನ್ನು ಪಡೆದ ರೈತರು ಅವನ್ನು ಮರುಪಾವತಿಸಲಾಗದೇ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವು ಕೃಷಿ ಕ್ಷೇತ್ರದ ಹಾಗೂ ರೈತರ ಹಿತಾಸಕ್ತಿ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ.
ಸಾಲ ಮನ್ನಾ ಮಾಡುವುದು ಅಲ್ಪಕಾಲಿಕ ನಲಿವು ಮಾತ್ರ ನೀಡುತ್ತದೆ. ಇದರ ಹೊರೆಯನ್ನು ಪ್ರಜೆಗಳ ತಲೆಗೇ ಕಟ್ಟುವುದಂತೂ ಖಚಿತ. ರೈತರ ನಾನಾ ಸಮಸ್ಯೆಗಳಿಗೆ ಸಮಗ್ರ ಹಾಗೂ ಶಾಶ್ವತ ಪರಿಹಾರ ರೂಪಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡಲೇಬೇಕಿದೆ.
