ಕರ್ನಾಟಕ ಸರ್ಕಾರವು ಬೆಂಗಳೂರು ಮತ್ತು ಸುತ್ತಮುತ್ತಲ ನಿವಾಸಿಗಳ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ಕಟ್ಟುವ ಪ್ರಸ್ತಾಪ ಮುಂದಿಟ್ಟಿತು. ತಮಿಳುನಾಡು ಇದರ ವಿರುದ್ಧ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತು. ತೀರ್ಪು ಕರ್ನಾಟಕ ಸರ್ಕಾರದ ಪರ ಬಂದಿತು. ಪ್ರಸ್ತಾಪಿತ ಅಣೆಕಟ್ಟಿನ ಕ್ಷಮತೆ ೬೭ ಟಿಎಂಸಿ ಎನ್ನಲಾಗಿದೆ.
ಮೆಕೆದಾಟು ಅಣೆಕಟ್ಟು ಯೋಜನೆಯ ಸ್ಥಳ ಎಲ್ಲಿ?
ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಪ್ರಕಾರ, ಮೂಗೂರು ಕಾಡಿನ ಕಾವಲು ಗೋಪುರದಿಂದ ಹಿಡಿದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಳಿ ಹನೂರು ಕಾಡಿನ ಸನಿಹ ಬೆಟ್ಟದ ಪಾದದ ವರೆಗಿನ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಮೂಗೂರು ಕಾಡು ಮೇಕದಾಟಿನಿಂದ ೯.೧ ಕಿಲೋಮೀಟರ್ ದೂರದಲ್ಲಿದ್ದು, ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದೆ.
ಪ್ರಸ್ತಾಪಿತ ಅಣೆಕಟ್ಟಿನ ಸ್ಥಳವು ಮೇಕೆದಾಟು ಮತ್ತು ಕಾವೇರಿ ಮತ್ತು ಅರ್ಕಾವತಿ ನದಿ ಸೇರುವ ಸ್ಥಳವಾದ ಸಂಗಮದ ನಡುವೆ ಇದೆ. ಸಂಗಮ ಪ್ರವಾಸಿಗಳಿಗೆ ಪ್ರಮುಖ ತಾಣವಾಗಿದೆ.
ಪ್ರಸ್ತಾಪಿತ ಮೇಕೆದಾಟು ಅಣಿಕಟ್ಟಿನಿಂದ ಉಂಟಾಗಬಹುದಾದ ಅಪಾಯಗಳೇನು?
ಸದ್ಯಕ್ಕೆ ಮೇಕೆದಾಟು ಅಣೆಕಟ್ಟಿಗೆ ಡಿಪಿಆರ್ ಸಿದ್ಧಗೊಳಿಸಲಾಗುತ್ತಿದೆ. ಆದರೆ ಸರ್ಕಾರವು ಅಣೆಕಟ್ಟಿನಿಂದಾಗಬಹುದಾದ ಪರಿಸರ ಸಮಸ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿದೆಯೋ ತಿಳಿಯದು. ಮೂಲವೊಂದರ ಪ್ರಕಾರ, ೪೭ ಚದರ ಕಿಲೋಮೀಟರ್ ವಿಸ್ತೀರ್ಣದ, ದೇಶದಲ್ಲೇ ಅತ್ಯುತ್ತಮ ನದಿ ಅರಣ್ಯ ಹಾಗೂ ೨ ಚದರ ಕಿಲೋಮೀಟರ್ ವಿಸ್ತೀರ್ಣದ ಕೃಷಿ ಅಥವಾ ಗ್ರಾಮ ಜಮೀನು ಮುಳುಗಡೆಯಾಗಲಿದೆ. ತಮ್ಮ ಜಮೀನು ಕಳೆದುಕೊಳ್ಳುವ ಜಮೀನು ಮಾಲೀಕರಿಗೆ ಪ್ರತಿ ಎಕರೆಗೆ ೬೫ ಲಕ್ಷ ರೂಪಾಯಿಗಳಂತೆ ನೀಡಲಾಗುವುದು.
ಮೇಕೆದಾಟು ಅಣೆಕಟ್ಟಿನ ಬಗ್ಗೆ ವನ್ಯಜೀವಿ ಮತ್ತು ಅರಣ್ಯ ತಜ್ಞರೊಂದಿಗೆ ಚರ್ಚಿಸಲಾಯಿತು. ಇದರಿಂದ ಬಂದ ಮಾಹಿತಿಯ ಪ್ರಕಾರ ಈ ರೀತಿಯ ಹಾನಿ ಖಚಿತ:
- ಬೊಮ್ಮಸಂದ್ರ, ಗಾಳಿಬೋರೆ, ಮಡಿವಾಳ, ಕೊಗ್ಗೆದೊಡ್ಡಿ, ನೆಲ್ಲೂರುದೊಡ್ಡಿ ಮತ್ತು ಸಂಪತ್ಗೆರೆದೊಡ್ಡಿ — ಈ ಆರು ಗ್ರಾಮಗಳು ಮುಳುಗಡೆಯಾಗಿ ಗಾಮಸ್ಥರು ನಿರಾಶ್ರಿತರಾಗುವ ಭೀತಿಯಿದೆ.
- ಈ ವಲಯದಲ್ಲಿ ಆನೆಗಳ ಚಲನವಲನಗಳುಂಟು. ಆಣೆಕಟ್ಟು ಯೋಜನೆಯಿಂದಾಗಿ ಮಾನವ-ಆನೆ ನಡುವಿನ ಘರ್ಷಣೆ ಹೆಚ್ಚಾಗಿ, ಆನೆ ಮತ್ತು ಜನರ ಸಾವುಗಳು ಸಂಭವಿಸಬಲ್ಲವು.
- ನೀರಿನ ಅಭಾವವುಂಟಾದಾಗ ರಾಜ್ಯಗಳ ನಡುವೆ ಘರ್ಷಣೆಯಾಗಿ ಜನರು ಮತ್ತು ಸ್ವತ್ತುಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.
- ಒಂದು ಹೆಕ್ಟೇರ್‌ನಲ್ಲಿ ೧೦೦ ಮರಗಳನ್ನು ಅಂದಾಜಿಸಿಕೊಂಡು, ಸುಮಾರು ೪,೭೦,೦೦೦ ಮರಗಳನ್ನು ಕಡಿಯಬೇಕಾಗುವುದು. ಇವುಗಳ ಪೈಕಿ ಹಲವು ಮರಗಳು ಸುಮಾರು ೧೦೦ ವರ್ಷಗಳಿಗಿಂತಲೂ ಹೆಚ್ಚು ಆಯುಸ್ಸಿನವು, ಹಾಗೂ ಕಾವೇರಿ ನದಿಯ ಪ್ರಮುಖ ಮರ “ಟರ್ಮಿನಲಿಯಾ ಅರ್ಜನ” ತಳಿಯ ಮರಗಳಿವೆ.
- ಹಲವಾರು ಸರಿಸೃಪಗಳು ಮತ್ತು ಸಸ್ತನಿ ವರ್ಗದ ಪ್ರಾಣಿಗಳ ಮಾರಣಹೋಮವಾಗಬಲ್ಲದು.
- ಇಲ್ಲಿ ಆಂಜನೇಯ ದೇವಸ್ಥಾನ ಮತ್ತು ಬ್ರಿಟಿಷರು ನಿರ್ಮಿಸಿದ ವಿದ್ಯುತ್ ಉತ್ಪಾದನಾ ಕೇಂದ್ರ ಸೇರಿದಂತೆ ಕೆಲವು ಪಾರಂಪರಿಕ ಕಟ್ಟಡಗಳಿದ್ದು, ಅಣೆಕಟ್ಟಿನ ನೀರಿನಿಂದ ಮುಳುಗಡೆಯಾಗಬಹುದು.
ಮೇಲಿನವಷ್ಟೇ ಇಲ್ಲ ಇನ್ನೂ ಇವೆ.
ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟಿನಿಂದ ನಿಜಕ್ಕೂ ಲಾಭವುಂಟೇ?
ಪ್ರಸ್ತಾಪಿತ ಅಣೆಕಟ್ಟಿನ ಲಾಭಗಳನ್ನು ಪ್ರಶ್ನಿಸದಿರಲಾಗದು. ಕಾವೇರಿ ನದಿಯಿಂದ ಬರುವ ನೀರಿನ ಪಯಕಿ ೩೭%-೪೦%ರಷ್ಟು ಸೋರಿಕೆ ಮೂಲಕ ಪೋಲಾಗುತ್ತದೆ. ಸೋರಿಕೆಯನ್ನು ಸರಿಪಡಿಸಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜಾಗುವುದರಲ್ಲಿ ಸಂಶಯವಿಲ್ಲ.
ಅಂತಿಮವಾಗಿ, ಕಾವೇರಿ ನದಿ ನೀರಿನ ಗುಣಮಟ್ಟವೇ ಕಳಪೆಯಾಗಿದೆ. ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣಾ ಮಂಡಳಿ ನೀಡಿದ ಮಾಹಿತಿಯ ಪ್ರಕಾರ ಕಾವೇರಿ ನದಿ ನೀರಿನ ಗುಣಮಟ್ಟವನ್ನು “ಗ್ರೇಡ್ ಸಿ” (ಕಳಪೆ) ವರ್ಗಕ್ಕೆ ಸೇರಿಸಲಾಗಿದೆ. ಅರ್ಕಾವತಿ ನದಿ ನೀರಿನ ಗುಣಮಟ್ಟವನ್ನು ಕನಕಪುರದ ಬಳಿ “ಗ್ರೇಡ್ ಇ”(ಅತಿ ಕಳಪೆ) ವರ್ಗಕ್ಕೆ ಸೇರಿಸಲಾಗಿದೆ. ಇದನ್ನು ಸಮರೋಪಾದಿಯಾಗಿ ಸರಿಪಡಿಸುವ ಅಗತ್ಯವಿದೆ.
ಅತಿಥಿ ಲೇಖರು: ಗೋಪ
