ಹಿಂದಿನ ಸಿದ್ದರಾಮಯ್ಯ ಸರ್ಕಾರವು ಒಂದೂ ವರೆ ವರ್ಷಗಳ ಹಿಂದೆ ಅದ್ದೂರಿಯಾಗಿ ಆರಂಭಿಸಿದ ಇಂದಿರಾ ಕ್ಯಾಂಟೀನ್ ಈಗ ಆಕರ್ಷಣೆ ಕಳೆದುಕೊಳ್ಳುತ್ತಿದೆ.
ತಿಂಡಿ-ಊಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಆಹಾರ ಅಕ್ಷರಶಃ ರುಚಿ ಕಳೆದುಕೊಳ್ಳುತ್ತಿದೆ. ಗ್ರಾಹಕರು ಖಾಸಗಿ ಉಪಾಹಾರ ಕೇಂದ್ರಗಳತ್ತ ನಡೆಯುತ್ತಿರುವುದು ಸಾಮಾನ್ಯವಾಗುತ್ತಿದೆ.
ಹೀಗಿರುವಾಗ, ಇಂದಿರಾ ಕ್ಯಾಂಟೀನ್ ಯಾರಿಗೆ ಬೇಕು ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಎದ್ದಿದೆ.
ಕಳೆದ ಗಣರಾಜ್ಯೋತ್ಸವದಂದು ಗೌರಿಬಿದನೂರಿನಲ್ಲಿ ನೂತನ ಇಂದಿರಾ ಕ್ಯಾಂಟೀನ್‌ನ್ನು ಕೃಷಿ ಸಚಿವ ಎನ್ ಎಚ್ ಶಿವಶಂಕರ್ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಇಂದಿರಾ ಕ್ಯಾಂಟೀನ್‌ನ ಉದ್ದೇಶವೇನೆಂದರೆ ಹಸಿದ ಹೊಟ್ಟೆಗೆ ಅನ್ನ ನೀಡುವ ಏಕೈಕ ಉದ್ದೇಶ ಎಂದು ಈ ಮುಖಂಡರು ಹೇಳಿದರು.
ಅದರೆ ವಾಸ್ತವಾಂಶ ಬೇರೆಯೇ ಇದೆ. ಬೆಳಗಿನ ತಿಂಡಿಗೆ ನೀಡಲಾದ ಇಡ್ಲಿ ವಿಪರೀತ ಗಟ್ಟಿ. ಸಾಂಬಾರು ತಟ್ಟೆಯಲ್ಲಿ ನಿಲ್ಲುವುದೇ ಇಲ್ಲ. ಚಟ್ನಿ ತೀರಾ ನೀರಾಗಿರುತ್ತದೆ. ಒಟ್ಟಾರೆ ಕಳಪೆ ಗುಣಮಟ್ಟದ ತಿಂಡಿ.
ಮಧ್ಯಾಹ್ನದ ಊಟದ ಬಗ್ಗೆಯಂತೂ ಕೇಳುವ ಹಾಗೇ ಇಲ್ಲ. ದಿನವೂ ಅದೇ ಅನ್ನ-ಸಾಂಬಾರ್. ವೇಳಾಪಟ್ಟಿಯಲ್ಲಿ ಪ್ರಕಟಿಸಿರುವ ಚಿತ್ರಾನ್ನ, ಪುಲಿಯೋಗರೆ, ವಾಂಗಿಭಾತ್ ಇತ್ಯಾದಿ ತಿನಿಸುಗಳು ದೊರೆಯುತ್ತಿಲ್ಲ.
ಇಂದಿರಾ ಕ್ಯಾಂಟೀನ್‌ಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೆಲವೇ ದಿನಗಳಲ್ಲಿ ಕೆಟ್ಟುಕೂತಿತು. ಕ್ಯಾಂಟೀನ್‌ನವರು ಕ್ಯಾನ್ ಮೂಲಕ ಗ್ರಾಹಕರಿಗೆ ಕುಡಿಯುವ ನೀರು ನೀಡುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಐದು ರೂಪಾಯಿ, ಹತ್ತು ರೂಪಾಯಿ ನೀಡಿ ಸ್ವಾದಿಷ್ಟವಿಲ್ಲದ ತಿಂಡಿ, ಊಟ ಸವಿಯುವ ಬದಲು ಉಪವಾಸವಿರುವುದೇ ಲೇಸು ಎಂದು ಈಗಾಗಲೇ ಹಲವು ಸಾರ್ವಜನಿಕರಿಗೆ ಅರಿವಾಗಿದೆ.
ಸಂಬಂಧಿತ ಅಧಿಕಾರಿಗಳು ಇದರ ಬಗ್ಗೆ ನಿಗಾ ವಹಿಸಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಡವರೂ ಸಹ ಮನುಷ್ಯರೇ ಎಂಬುದನ್ನು ಸರ್ಕಾರಕ್ಕೆ ಈಗಲಾದರೂ ಜ್ಞಾನೋದಯವಾಗಲಿ ಎಂದು ತೊಂಡೇಬಾವಿಯ ನಿವಾಸಿಯೊಬ್ಬರು ಹೇಳಿದರು.
