೨೦೧೮ರಲ್ಲಿ ೩೮ ಶತಕೋಟಿ ಡಾಲರ್ ವಿದೇಶಿ ಹೂಡಿಕೆಯೊಂದಿಗೆ, ಭಾರತ ಚೀನಾವನ್ನು ಹಿಂದಿಕ್ಕಿದೆ
ವಿದೇಶಿ ನೇರ ಹೂಡಿಕೆ (ಎಫ್ಡಿಐ) ವಿಚಾರದಲ್ಲಿ ೨೦೧೮ ಭಾರತದ ಆರ್ಥಿಕತೆಯ ಪಾಲಿಗೆ ಬಹಳ ಒಳ್ಳೆಯ ವರ್ಷವಾಗಿದೆ. ವರದಿಯೊಂದರ ಪ್ರಕಾರ, ಎರಡು ದಶಕಗಳಲ್ಲಿ ಮೊದಲ ಬಾರಿಗೆ, ೨೦೧೮ರಲ್ಲಿ ಭಾರತಕ್ಕೆ ಚೀನಾಗಿಂತಲೂ ಹೆಚ್ಚು ವಿದೇಶಿ ನೇರ ಹೂಡಿಕೆ ಸಂದಿತು.
ಜಾಗತಿಕ ಮಟ್ಟದಲ್ಲಿ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಚೀನಾ ಬಹಳಷ್ಟು ಉದ್ಯಮಗಳನ್ನು ಸೆಳೆಯುತ್ತಿತ್ತು. ಆದರೆ, ಈ ವರ್ಷ ಭಾರತಕ್ಕೆ ೩೭.೭ ಶತಕೋಟಿ ಡಾಲರ್ ಒಟ್ಟು ಮೌಲ್ಯದ ೨೩೫ ಒಪ್ಪಂದಗಳು ಸಂದವು. ಇದು ದೇಶದ ಪಾಲಿಗೆ ಅತಿ ಹೆಚ್ಚಿನ ಮೊತ್ತವಾಗಿ, ಚೀನಾವನ್ನೂ ಸಹ ಹಿಂದಿಕ್ಕಿದೆ. ಜಾಗತಿಕ ಮಟ್ಟದ ವಿಲೀನ-ಸ್ವಾಧೀನ ಹಾಗೂ ಬಂಡವಾಳ ಮಾರುಕಟ್ಟೆ ಮಾಹಿತಿದಾರ ಸಂಸ್ಥೆ ಡೀಲಾಜಿಕ್ ಇಂದ ಮಾಹಿತಿ ಕಲೆಹಾಕಿ ಎಕನಾಮಿಕ್ ಟೈಮ್ಸ್ ಈ ವರದಿ ಮಾಡಿದೆ. ಚೀನಾ ಮತ್ತು ಅಮೆರಿಕಾ ನಡುವಿನ ವ್ಯಾಪಾರದ ಯುದ್ಧವು ಚೀನಾದತ್ತ ವಿದೇಶಿ ನೇರ ಹೂಡಿಕೆ ಕಡಿಮೆಯಾಗಲು ಕಾರಣವಾಗಿದೆ.
“೨೦೧೮ರ ಇಸವಿಯು ಭಾರತಕ್ಕೆ ಬಿಡುವಿಲ್ಲದ ವಿಲೀನ ಮತ್ತು ಸ್ವಾಧೀನಗಳ ವರ್ಷವಾಗಿದೆ. ನಮ್ಮ ದೇಶದೊಳಗೆ ವಿಲೀನ-ಸ್ವಾಧೀನಗಳ ಹರಿವು ಮುಂದುವರೆಯಲಿದೆ” ಎಂದು ಜೆಪಿ ಮೋರ್ಗಾನ್ ಚೇಸ್ ಸಂಸ್ಥೆಯ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಮುಖ್ಯ ಕಾರ್ಯನಿರ್ವಾಹಿಕೆ ಕಲ್ಪನಾ ಮೊರ್ಪಾರಿಯಾ ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. “ಭಾರತದ ಜನಸಂಖ್ಯಾಶಾಸ್ತ್ರ, ಇ-ವಾಣಿಜ್ಯದ ವಿದ್ಯಮಾನ, ಭಾರತವು ತಂತ್ರಜ್ಞಾನದ ಕ್ರಾಂತಿಯ ಹಲವಾರು ಹಂತಗಳನ್ನು ದಾಟಿ ಮುಂದುವರೆದಿರುವ ರೀತಿ – ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ತಂತ್ರಜ್ಞಾನ ಮತ್ತು ಹಣಕಾಸು ಸೇವಾ ವಲಯದಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುವುದನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಮೊರ್ಪಾರಿಯಾ ಹೇಳಿದ್ದಾರೆ.
ರಾಜ್ಯ ಅಥವಾ ರಾಷ್ಟ್ರಮಟ್ಟದ ಚುನಾವಣೆಯಾಗಿರಲಿ – ರಾಜಕೀಯ ವಾತಾವರಣದಲ್ಲಿ ಅಲ್ಪಾವಧಿಯ ಅನಿಶ್ಚಿತತೆಯಿದ್ದರೂ ಜಾಗತಿಕ ಹೂಡಿಕೆದಾರರು ವಿಶಿಷ್ಟವಾಗಿ ಭಾರತದ ಮೇಲೆ ತಮ್ಮ ಗಮನ ಕೇಂದ್ರೀಕರಿಸುತ್ತಾರೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಭಾರತ ವಲಯದ ಅಧ್ಯಕ್ಷರಾದ ಸಂಜಯ್ ಚಟರ್ಜಿ ತಿಳಿಸಿದರು.
ಜಾಗತಿಕ ಇ-ವಾಣಿಜ್ಯ ತಾಣ ವಾಲ್ಮಾರ್ಟ್ ಫ್ಲಿಪ್ಕಾರ್ಟ್ನ್ನು ೧೬ ಶತಕೋಟಿ ಡಾಲರ್ಗಳಿಗ ಕೊಂಡುಕೊಂಡಿದ್ದು ಈ ವರ್ಷ ಭಾರತದ ವಿದೇಶಿ ನೇರ ಹೂಡಿಕೆಯ ಪ್ರಮಾಣ ಹೆಚ್ಚಿಸಲು ಕಾರಣವಾಯಿತು. ತಂತ್ರಜ್ಞಾನ-ಚಾಲಿತ ಗ್ರಾಹಕರ ಚಿಲ್ಲರೆ ಮತ್ತು ಹಣಕಾಸು ಸೇವಾ ವಲಯಗಳು ಸದ್ಯದ ಭವಿಷ್ಯದಲ್ಲಿ ಗಣನೀಯವಾದ ವಿಲೀನ ಮತ್ತು ಸ್ವಾಧೀನ ಚಟುವಟಿಕೆಗಳು ನಡೆಯಬಹುದು ಎಂದು ತಜ್ಞರು ನಂಬುತ್ತಾರೆ.
ಇ-ವಾಣಿಜ್ಯವಲ್ಲದೇ, ದಿವಾಳಿತನದ ಹೊಸ ಚೌಕಟ್ಟಿನ ಕಾರಣ ನಡೆಯುತ್ತಿರುವ ಆಸ್ತಿ ವಿತರಣೆಯೂ ಸಹ ಹೆಚ್ಚು ಧನಸಾಮರ್ಥ್ಯವುಳ್ಳ ವಿದೇಶಿ ಸಂಸ್ಥೆಗಳು ಭಾರತದಲ್ಲಿ – ಮುಖ್ಯವಾಗಿ ತಯಾರಿಕಾ ಕ್ಷೇತ್ರದಲ್ಲಿ – ಹೂಡಲು ಪ್ರೇರಣೆ ನೀಡುತ್ತಿದೆ.
