ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ಇಂದು ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಂದುವರೆಯಿತು. ಮಧ್ಯಂತರ ಪಾಕಿಸ್ತಾನಿ ನ್ಯಾಯಾಧೀಶರನ್ನು ಬದಲಿಸಲು ಮನವಿಯನ್ನು ಪಾಕಿಸ್ತಾನ ಸಲ್ಲಿಸಿತ್ತು.
“ಗೂಢಚಾರಿ’ ಎನ್ನಲಾದ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನಿ ಸೇನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿತ್ತು. ಇದರ ವಿರುದ್ಧ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತು. ಇದರ ವಿಚಾರಣೆ ಮುಂದುವರೆದಿದೆ.
ಮಧ್ಯಂತರ ನ್ಯಾಯಾಧೀಶ ತಸದುಕ್ ಹುಸೇನ್ ಜಿಲಾನಿ ಅವರಿಗೆ ನಿನ್ನೆ ಹೃದಯಾಘಾತ ಸಂಭವಿಸಿದ್ದು ಅವರ ಸ್ಥಾನದಲ್ಲಿ ಇನ್ನೊಬ್ಬ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಪಾಕಿಸ್ತಾನದ ಪರ ಪ್ರಧಾನ ವಕೀಲ ಅನ್ವರ್ ಮನ್ಸೂರ್ ಖಾನ್ ಮನವಿ ಮಾಡಿದರು.
ಆದರೆ, ಐಸಿಜೆ ಅಧ್ಯಕ್ಷ ನ್ಯಾಯಾಧೀಶ ಅಬ್ದುಲ್ಖಾವಿ ಅಹಮದ್ ಯುಸಫ್ ಈ ಮನವಿಯನ್ನು ತಿರಸ್ಕರಿಸಿದರು. “ನಿಮ್ಮ ಹೇಳಿಕೆ ಸಿದ್ಧವಾಗಿದೆಯೇ ಎಂಬುದನ್ನು ನಾನು ಕೇಳಬಯಸುವೆ. ನಾವು ನಿಮ್ಮ ವಾದವನ್ನು ಆಲಿಸಲು ಸಿದ್ಧರಾಗಿದ್ದೇವೆ” ಎಂದರು.
ನಂತರ ಖಾನ್ ತಮ್ಮ ವಾದ ಮುಂದುವರೆಸಿದರು.
ನಿನ್ನೆ ಭಾರತ ಪರ ವಕೀಲ ಹರೀಶ್ ಸಾಳ್ವೆ ತಮ್ಮ ವಾದ ಮಂಡಿಸಿದರು. “ಜಾಧವ್ ಅವರ ನ್ಯಾಯಾಂಗ ವಿಚಾರಣೆ ಪಾರದರ್ಶಕವಾಗಿರಲಿಲ್ಲ. ಹಾಗಾಗಿ ಜಾಧವ್ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ತಮ್ಮ ವಾದದಲ್ಲಿ ಹೇಳಿದರು.
ಪಾಕಿಸ್ತಾನದ ಪರ ವಕೀಲರು ತಮ್ಮ ವಾದದಲ್ಲಿ ಪಾಕಿಸ್ತಾದ ಸಂವಿಧಾನದ ಪ್ರಕಾರವೇ ಸೇನಾ ನ್ಯಾಯಾಲಯವನ್ನು ರಚಿಸಿತ್ತು, ಜಾಧವ್ ಅವರಿಗೆ ನ್ಯಾಯಯುತವಾಗಿ ಎಲ್ಲಾ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿತ್ತು ಎಂದು ಸಮರ್ಥಿಸಲು ಯತ್ನಿಸಿದರು.
