ಆಸ್ಪತ್ರೆಯ ಆವರಣದಲ್ಲಿ ಅನಿಲ ಮಳಿಗೆ: ಅಪಾಯ ಕಟ್ಟಿಟ್ಟ ಬುತ್ತಿ
ಆಸ್ಪತ್ರೆಯೊಂದರಲ್ಲಿ ವೈದ್ಯರು, ರೋಗಿಗಳು, ಶುಶ್ರೂಷಾ ಸಿಬ್ಬಂದಿ ಮತ್ತು ರೋಗಿಗಳ ಸಂಬಂಧಿಕರು ಮತ್ತು ಕೊಟ್ಯಾಂತರ ರೂಪಾಯಿ ಮೌಲ್ಯದ ಶಸ್ತ್ರಚಿಕಿತ್ಸಾ ಯಂತ್ರೋಪಕರಣಗಳಿಗೆ ಎಲ್ಲಾ ರೀತಿಯ ಸುರಕ್ಷತಾ ಹಕ್ಕಿದೆ
ಅಗ್ನೇಯ ಬೆಂಗಳೂರಿನ ಜಿಗಣಿಯ ಎಪಿಸಿ ವೃತ್ತದ ಬಳಿಯಿರುವ ಸುಹಾಸ್ ಆಸ್ಪತ್ರೆಯ ಆವರಣದಲ್ಲಿ ಎಚ್‌ಪಿ ಗ್ಯಾಸ್ ಗೋದಾಮೊಂದು ಆರಂಭವಾಗಿದೆ. ಎಲ್‌ಪಿಜಿ ಅನಿಲ ಸಣ್ಣ ಕಿಡಿಯಿಂದಲೂ ಸಹ ಬೆಂಕಿ ಹಚ್ಚಿಕೊಳ್ಳಬಹುದು.
ಭಾರತ ಸರ್ಕಾರ ಸ್ವಾಮ್ಯದ ಪೆಸೊ (ಪೆಟ್ರೊಲಿಯಮ್ ಮತ್ತು ವಿಸ್ಫೋಟಕ ಸುರಕ್ಷತಾ ಸಂಸ್ಥೆ) ಅನಿಲ ಸಿಲಿಂಡರ್ ಸೇರಿದಂತೆ ವಿವಿಧ ಪೆಟ್ರೊಲಿಯಂ ಉತ್ಪನ್ನಗಳ ಬಗ್ಗೆ ಸುರಕ್ಷತಾ ನಿಮಗಳನ್ನು ರಚಿಸಿದೆ. ಇದರಂತೆ, ಅನಿಲ ಸಿಲಿಂಡರ್ ಗೋದಾಮುಗಳನ್ನು ಆಸ್ಪತ್ರೆ ವಿದ್ಯಾಸಂಸ್ಥೆಗಳ ಹಾಗೂ ಇತರೆ ಸಾರ್ವಜನಿಕ ಸ್ಥಳಗಳ ಆವರಣದಲ್ಲಿ ಅಥವಾ ಸಮೀಪದಲ್ಲಿ ಸ್ಥಾಪಿಸುವಂತಿಲ್ಲ.
http://peso.gov.in/Work_Mannual/Gas_cylinder_Rule_WM.pdf
ಅನಿಲ ಸಿಲಿಂಡರ್‌ಗಳ ಬಗ್ಗೆ ೩೨ ಪುಟಗಳುಳ್ಳ ನಿಯಮಾವಳಿಗಳನ್ನು ಇಲ್ಲಿ ಪ್ರಕಟಿಸಿದೆ. ಅದರಂತೆ ಸಂಕುಚಿತ ಅನಿಲಗಳು (ಸ್ಥಾಯಿ ಅನಿಲ, ದ್ರವೀಕರಿಸಬಹುದಾದ ಅನಿಲ, ದ್ರವದಲ್ಲಿ ವಿಸರ್ಜಿತ ಅನಿಲ – ಇವನ್ನು ಲೋಹದ ಧಾರಕದಲ್ಲಿ ತುಂಬಿಡಲಾಗುತ್ತದೆ. ಒಂದು ವೇಳೆ ಈ ಧಾರಕವು ಸಿಡಿದಾಗ ಬಹಳ ಅಪಾಯಕಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಬಾರತ ಸರ್ಕಾರದ ಕಾರ್ಮಿಕ ಇಲಾಖೆಯು ೧೯೩೮ರ ಸೆಪ್ಟೆಂಬರ್ ೨೮ರಂದು ಹೊರಡಿಸಿದ ಅಧಿಸೂಚನೆಯಂತೆ ಲೋಹದ ಧಾರಕದಲ್ಲಿ ತುಂಬಿದ ಸಂಕುಚಿತ ಅನಿಲವನ್ನು ವಿಸ್ಫೋಟಕ ಎಂದು ಪರಿಗಣಿಸಲಾಗಿದೆ.
ಇಂತಹ ಸಂಕುಚಿತ ಅನಿಲಗಳ ತುಂಬಿಸುವಿಕೆ, ಹೊಂದಿಸುವಿಕೆ, ರವಾನೆ ಮತ್ತು ಆಮದನ್ನು ನಿಯಂತ್ರಿಸಿ ನಿರ್ವಹಿಸಲು ಭಾರತ ಸರ್ಕಾರ ಅನಿಲ ಸಿಲಿಂಡರ್ ನಿಯಮಗಳನ್ನು ೨೦೦೪ರಲ್ಲಿ ಜಾರಿಗೊಳಿಸಿತು. ಅನಿಲಗಳ ತುಂಬಿಸುವಿಕೆ, ಹೊಂದಿಸುವಿಕೆ, ರವಾನೆ ಮತ್ತು ಆಮದು ಕಾರ್ಯದಲ್ಲಿ ತೊಡಗಿರುವ ಜನರ ಸುರಕ್ಷತೆಯು ಈ ಕಾಯಿದೆಯ ಧ್ಯೇಯವಾಗಿದೆ.
ಇದರಲ್ಲಿ, ಅನಿಲ ಗೋದಾಮಿನಲ್ಲಿರುವ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು ಆಧರಿಸಿ ಆ ಗೋದಾಮು ಮತ್ತು ಅತಿ ಹತ್ತಿರದ ವಿದ್ಯಾಸಂಸ್ಥೆ, ಕೂಡುಮನೆ (apartment), ಆಸ್ಪತ್ರೆಯಿಂದ ಇಂತಿಷ್ಟು ದೂರವಿರಬೇಕೆಂದು ನಿಗಧಿಪಡಿಸಲಾಗಿದೆ.
ಈ ನಿಯಮಗಳನ್ನು ಪರಿಗಣಿಸಿದರೆ, ಎಚ್‌ಪಿ ಗ್ಯಾಸ್ ಮಳಿಗೆಯು ಸುಹಾಸ್ ಆಸ್ಪತ್ರೆಗೆ ತೀರಾ ಹತ್ತಿರವಿದೆ. ಇದು ನಿಯಮಗಳ ನೇರ ಉಲ್ಲಂಘನೆಯಾಗಿದೆ. ಇಲ್ಲಿರುವ ಸಿಲಿಂಡರ್‌ಗಳು ಆಸ್ಪತ್ರೆ ಮತ್ತು ಅದರ ಆವರಣ ಮತ್ತು ಸುತ್ತಮುತ್ತಲ ಸ್ಥಳಗಳಿಗೆ ಎಷ್ಟು ಅಪಾಯ ಒಡ್ಡಬಹುದೆಂಬುದನ್ನು ಯಾರು ಬೇಕಾದರೂ ಊಹಿಸಬಹುದು.
ಅನಿಲ ಸಿಲಿಂಡರ್ ವಿತರಕರು ಮನೆ-ಮನೆಗಳಲ್ಲಿ ಅನಿಲದ ಪೈಪು ಮತ್ತು ಒಲೆ ನೀಯತ್ತಾಗಿ ತಪಾಸಣೆ ಮಾಡುವಂತೆ ಅನಿಲ ಗೋದಾಮುಗಳ ತಪಾಸಣೆಯೂ ನಡೆಸಬೇಕು. ಆಸ್ಪತ್ರೆ, ವಿದ್ಯಾಸಂಸ್ಥೆ ಸೇರಿದಂತೆ ಹಲವು ಕಟ್ಟಡಗಳಲ್ಲಿರುವ ಅಮಾಯಕ ಜೀವಿಗಳಿಗೆ ಒಡ್ಡುವ ಅಪಾಯಗಳಿಂದ ರಕ್ಷಿಸಿಕೊಳ್ಳಲು ಸಹಕರಿಸಬೇಕು. ಅನಿಲ ಮಳಿಗೆ ಮತ್ತು ಗೋದಾಮುಗಳ ಬಗೆಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
