ಅಂಜಿಕೆಯಿಲ್ಲದೆ ಕಾನೂನು ಸುವ್ಯವಸ್ಥೆ ಜಾರಿಗೊಳಿಸಿ; “ವರ್ಗಾವಣೆ ಭಾಗ್ಯ” ದೊರೆಯುವುದು ಸಹಜ ಎಂಬುದು ರೂಪಾ ಐಪಿಎಸ್ ಅವರ ಮಾತು.
ಪತ್ರಿಕೆಯೊಂದರೊಂದಿಗಿನ ಸಂದರ್ಶನದಲ್ಲಿ ರೂಪಾ ಅವರು, “ಕಾನೂನನ್ನು ಮೀರುವಂತಹದ್ದು ಯಾವುದೂ ಇಲ್ಲ. ಯುವ ಮಹಿಳಾ ಐಪಿಎಸ್ ಅಧಿಕಾರಿಗಳು ಮತ್ತು ಬ್ಯೂರೊಕ್ರಾಟ್ ಅಧಿಕಾರಿಗಳು ಯಾವುದೇ ಅಂಜಿಕೆ ಮತ್ತು ಪಕ್ಷಪಾತವಿಲ್ಲದೆ ಕಾನೂನು-ಸುವ್ಯವಸ್ಥೆ ಜಾರಿಗೊಳಿಸಬೇಕು” ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡತಿ ಮಹಿಳಾ ಐಪಿಎಸ್ ಅಧಿಕಾರಿ ರುಪಾ ಡಿ. ಮೌದ್ಗಿಲ್, ಒಬ್ಬ ಧೀಮಂತ ಪೊಲೀಸ್ ಅಧಿಕಾರಿ. ದಾವಣಗೆರೆ ಮೂಲದವರಾದ ರೂಪಾ ಐಪಿಎಸ್, ತಮ್ಮ ವೃತ್ತಿಯ ಆರಂಭದಿಂದಲೂ ಪ್ರಭಾವಿ ವ್ಯಕ್ತಿಗಳನ್ನು ಎದುರಿಸಿ, ಯಶಸ್ವಿಯಾಗಿದ್ದಾರೆ.
ತಮ್ಮ ಕರ್ತವ್ಯ ಮಾಡುತ್ತಿದ್ದ ಕೇರಳದ ಯುವ ಮಹಿಳಾ ಐಪಿಎಸ್ ಅಧಿಕಾರಿಗಳು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳಿಂದ ಧಾಳಿಗೊಳಗಾಗಿದ್ದು ವರದಿಯಾಗಿದೆ. ಕೆಲವರನ್ನು ತಮ್ಮ ಹುದ್ದೆಯಿಂದ ವರ್ಗಾಯಿಸಿದ್ದೂ ಆಗಿದೆ. ಈ ವಿಚಾರದ ಬಗ್ಗೆ, “ಈ ಯುವ ಅಧಿಕಾರಿಗಳು ತಮ್ಮ ಒಳ್ಳೆಯ ಕೆಲಸಗಳನ್ನು ಮುಂದುವರೆಸಬೇಕು. ವರ್ಗಾವಣೆಯಾಗುವುದರಿಂದ ವಿಚಲಿತರಾಗಬಾರದು” ಎಂದು ರೂಪಾ ಐಪಿಎಸ್ ಹೇಳುತ್ತಾರೆ.
ಇವೆಲ್ಲ ವೃತ್ತಿ-ಸಂಬಂಧಿತ ಅಪಾಯಗಳು. ಪ್ರತಿಯೊಂದು ವೃತ್ತಿಗೂ ತನ್ನದೇ ಅದ ಅಪಾಯಗಳುಂಟು. ಕಾನೂನಿನ ಪ್ರಕಾರ ಎಲ್ಲವನ್ನೂ ಸರಿಯಾಗಿ ಮಾಡಿದ್ದಲ್ಲಿ ಅಧಿಕಾರಿಗಳು ಸಣ್ಣ-ಪುಟ್ಟ ಕಿರಿಕಿರಿಗಳಿಂದ ವಿಚಲಿತರಾಗಬೇಕಿಲ್ಲ. ಅವರು ವರ್ಗಾವಣೆಗಳನ್ನು ಒಂದು ಕಪ್ಪು ಚುಕ್ಕೆ ಎಂದು ಪರಿಗಣಿಸುವ ಬದಲು, ತಾವು ಮಾಡಿರುವ ಒಳ್ಳೆಯ ಕೆಲಸಕ್ಕೆ ತಮ್ಮ ಕುಲಾವಿಯಲ್ಲಿನ ಒಂದು ಗರಿಯಂತೆ ಸ್ವೀರಿಸಬೇಕು ಎಂದು ರೂಪಾ ಅವರು ಸಲಹೆ ನೀಡುತ್ತಾರೆ.
ಯಾವ ಹುದ್ದೆಯೂ ಕೆಟ್ಟದ್ದಲ್ಲ. ನೀವು ಯಾವ ಹುದ್ದೆಯಲ್ಲಾದರೂ ಸಹ ನಿಮ್ಮ ಕ್ಷಮತೆ ತೋರಿಸಬಲ್ಲರು. ವರ್ವಾವಣೆಗಳು ಸರ್ಕಾರಿ ಕೆಲಸದ ಅವಿಭಾಜ್ಯ ಅಂಗ. ಇದರಿಂದ ಸ್ವಲ್ಪ ಅನನುಕೂಲವಾದರೂ, ಚಿಂತಿಸಬೇಡಿ ಎಂದು ರೂಪಾ ಅಭಯ ನೀಡಿದರು.
ಒಬ್ಬ ಮಂತ್ರಿಯಾಗಲಿ ಅಥವಾ ಅವರ ಮೇಲಧಿಕಾರಿಯಾಗಲಿ, ಕಾನೂನು ಉಲ್ಲಂಘಿಸಿದವರ ಪಾಲಿಗೆ ರೂಪಾ ಐಪಿಎಸ್ ಅವರು ದುಃಸ್ವಪ್ನವಾಗಿದ್ದಾರೆ. ಎಂದೆಂದಿಗೂ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ರೂಪಾ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನೂ ಸಹ ಎದುರಿಸಿದ್ದರು.
ಹದಿನೆಂಟು ವರ್ಷಗಳ ತಮ್ಮ ವೃತ್ತಿಯಲ್ಲಿ ರೂಪಾ ಅವರು ಇದುವರೆಗೂ ಹಲವು ಸಲ ವರ್ಗಾವಣೆಯಾಗಿದ್ದುಂಟು. ಆದರೆ, ಯಾರೂ ಕಾನೂನನ್ನು ಮೀರುವಂತಿಲ್ಲ ಎಂಬುದು ಅವರ ಧ್ಯೇಯ. ಇತ್ತೀಚೆಗೆ, ಡಿಐಜಿ (ಕಾರಾಗೃಹ) ಹುದ್ದೆಯಿಂದ ಅವರನ್ನು ವರ್ಗಾಯಿಸಲಾಯಿತು. ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರೀಯ ಕಾರಾಗೃಹದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರಿಗೆ ವಿಶೇಷ ಸವಲತ್ತುಗಳು ಹಾಗೂ ಇತರೆ ಹಲವು ನಿಯಮಬಾಹಿರ ಚಟುವಟಿಕೆ ಹಾಗೂ ಭ್ರಷ್ಟಾಚಾರ ವಿಚಾರವಾಗಿ ತಮ್ಮ ಮೇಲಧಿಕಾರಿಯ ವಿರುದ್ಧವೇ ಕ್ರಮ ಜರುಗಿಸಿದ್ದರು ದಿಟ್ಟ ಮಹಿಳಾ ಐಪಿಎಸ್ ಅಧಿಕಾರಿ ರೂಪಾ.
ಚಿತ್ರ ಕೃಪೆ: D Roopa IPS Twitter
