ಇಂದು ಸ್ವತಂತ್ರ ಭಾರತದ ಮೊಟ್ಟಮೊದಲ ಸೇನಾ ಮಹಾದಂಡ ನಾಯಕ, ಕರ್ನಾಟಕದ ಕುವರ, ಕೊಡಗಿನ ವೀರ ಜನರಲ್ ಕೊಡಂದೇರ ಮಾದಪ್ಪ ಕಾರ್ಯಪ್ಪನವರ ಜನ್ಮದಿನ.
ಕಾರ್ಯಪ್ಪನವರು ದಿನಾಂಕ ೨೮ ಜನವರಿ ೮೯೯೯ ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಜನಿಸಿದರು.
ಭಾರತದ ಭೂಸೇನೆಯಲ್ಲಿ ಹಲವಾರು ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡಿ, ಒಬ್ಬ ಮಹಾನ್ ಯೋಧನೆಂಬ ಕೀರ್ತಿ ಪಡೆದರು.
ಎರಡನೆಯ ಮಹಾಯುದ್ಧದಲ್ಲಿ ಕಾರ್ಯಪ್ಪನವರು ಮುನ್ನಡೆಸುತ್ತಿದ್ದ ಪಡೆಯು “ಬನ್ನು” ಪ್ರದೇಶದಲ್ಲಿ ಸಶಸ್ತ್ರ ಬುಡಕಟ್ಟು ಜನಾಂಗದವರ ವಿರುದ್ಧ ಯುದ್ಧ ಮಾಡುತ್ತಿತ್ತು. ಬುಡಕಟ್ಟು ಜನಾಂಗದವರದು ಬಹಳ ಬಡ ಪರಿಸ್ಥಿತಿ, ನೀರಿಗೆ ಬಹಳ ತೊಂದರೆ ಎಂಬುದು ಕಾರ್ಯಪ್ಪನವರಿಗೆ ಗೊತ್ತಾಯಿತು. ಇದನ್ನು ಸದವಕಾಶ ಎಂದು ತಿಳಿದು, ಅವರ ಸೈನಿಕರ ಮೂಲಕ ಬಾವಿಯೊಂದನ್ನು ತೋಡಿಸಿ, ಈ ಬುಡಕಟ್ಟು ಜನಾಂಗದವರ ಮೆಚ್ಚುಗೆ ಪಡೆದರು.
ಭಾರತವು ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಗಳಿಸಿತು. ಭಾರತದ ಪ್ರಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು, ಭಾರತದ ಪ್ರಪ್ರಥಮ ಸೇನಾ ದಂಡನಾಯಕನನ್ನು ಆಯ್ಕೆ ಮಾಡುವ ಸಲುವಾಗಿ, ಹಿರಿಯ ಸೇನಾನಾಯಕರು ಮತ್ತು ಗಣ್ಯಾತಿಗಣ್ಯರ ಸಭೆ ಕರೆದರು.
ನೆಹರು ಸಭೆಯಲ್ಲಿ ಮಾತನಾಡುತ್ತ, “ಸಾಕಷ್ಟು ಅನುಭವವಿರುವ ಸೇನಾನಾಯಕರು ನಮ್ಮಲ್ಲಿ ಇಲ್ಲದ ಕಾರಣ, ನಾವೀಗ ಬ್ರಿಟಿಷ್ ಸೇನಾಧಿಕಾರಿಯೊಬ್ಬರನ್ನು ಮುಖ್ಯ ದಂಡನಾಯಕರನ್ನಾಗಿ ಆರಿಸುವುದು ಸೂಕ್ತ ಎಂಬುದು ನನ್ನ ಅನಿಸಿಕೆ” ಎಂದರು. ಬ್ರಿಟಿಷ್ ಆಡಳಿತದಲ್ಲಿ ನಾಯಕರಾಗದೆ, ಕೇವಲ ಹಿಂಬಾಲಕರಾಗಿರಲು ಮಾತ್ರ ಕಲಿತಿದ್ದ ಸೇನಾಧಿಕಾರಿಗಳು ಮತ್ತು ಗಣ್ಯರು ನೆಹರು ಅವರ ಮಾತಿಗೆ ಒಪ್ಪುವಂತೆ ತಲೆ ಅಲ್ಲಾಡಿಸಿದರು.
ಆಗ ಒಬ್ಬ ಸೇನಾಧಿಕಾರಿ – ನಾಥುಸಿಂಗ್ ರಾಠೋರ್ – ಎದ್ದು ನಿಂತು, ತಮಗೆ ಮಾತನಾಡಲು ಅವಕಾಶ ನೀಡಬೇಕೆಂದು ವಿನಂತಿಸಿದರು. ಇವರ ವಿನಂತಿಗೆ ಮತ್ತು ನೇರ ವರ್ತನೆಗೆ ನೆಹರು ಅವರು ಕೆಲ ಕ್ಷಣ ಅವಾಕ್ಕಾದರು. ನಂತರ ನೆಹರು ರಾಠೋರ್‌ರಿಗೆ ಮುಕ್ತವಾಗಿ ಮಾತನಾಡುವಂತೆ ಸೂಚಿಸಿದರು. ಆಗ ರಾಠೋರ್, “ನೋಡಿ ಮಹಾಸ್ವಾಮಿ, ದೇಶಕ್ಕೆ ನಾಯಕತ್ವವನ್ನು ನೀಡಲು ಬೇಕಾದಷ್ಟು ಅನುಭವವು ನಮ್ಮಲ್ಲಿ ಯಾರಿಗೂ ಇಲ್ಲವಾದುದರಿಂದ ಬ್ರಿಟಿಷ್ ಪ್ರಜೆಯೊಬ್ಬರನ್ನೇ ಭಾರತದ ಪ್ರಪ್ರಥಮ ಪ್ರಧಾನಿಯಾಗಿ ನೇಮಿಸುವುದು ಸೂಕ್ತವಲ್ಲವೇ?” ಎಂದು ಹೇಳಿದಾಗ ಆ ಸಭೆಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದತೆಯು ಆವರಿಸಿತು. ಸ್ವಲ್ಪ ಹೊತ್ತಿನ ಬಳಿಕ ಆ ಮಔನವನ್ನು ಮುರಿದ ನೆಹರು, “ಪ್ರಪ್ರಥಮ ಸೇನಾದಂಡನಾಯಕನಾಗಲು ನೀವು ಸಿದ್ಧರಿದ್ದೀರಾ?” ಎಂದು ರಾಠೋರ್‌ರನ್ನು ಕೇಳಿದರು. ಈ ಕೊಡುಗಯನ್ನು ನಿರಾಕರಿಸಿದ ರಾಠೋರ್, “ನಮ್ಮಲ್ಲಿ ನನ್ನ ಮೇಲಧಿಕಾರಿಯಾದ ಜನರಲ್ ಕಾರ್ಯಪ್ಪ ಎಂಬ ಹೆಸರಿನ ಪ್ರತಿಭಾವಂತ ಮೇಲಧಿಕಾರಿಯೊಬ್ಬರಿದ್ದಾರೆ, ಮತ್ತು ಅವರು ನಮ್ಮಲ್ಲೆಲ್ಲಾ ಅತ್ಯಂತ ಸಮರ್ಥರಾದವರು ಮತ್ತು ಅರ್ಹರಾದವರು” ಎಂದರು. ಹೀಗೆ ಧೀರ ಯೋಧ ಜನರಲ್ ಕಾರ್ಯಪ್ಪನವರು ಸ್ವತಂತ್ರ ಭಾರತದ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗಳ ಪ್ರಪ್ರಥಮ ಮುಖ್ಯದಂಡನಾಯಕರಾದರು ಮತ್ತು ರಾಠೋರ್ ಪ್ರಪ್ರಥಮ ಲೆಫ್ಟಿನೆಂಟ್ ಜನರಲ್ ಆದರು.
ಜನರಲ್ ಕಾರ್ಯಪ್ಪನವರು ೧೯೪೯ರಲ್ಲಿ ಅಂದಿನ ಪ್ರಧಾನ ಮಂತ್ರಿ ನೆಹರು ಅವರಿಗೆ ಸಲಹೆ ನೀಡಿದ್ದರು: “ನಮ್ಮ ದೇಶದ ಯುವಕರಿಗೆ ಸೇನಾ ಸೇವೆ ಕಡ್ಡಾಯಗೊಳಿಸಬೇಕು” ಆದರೆ ನೆಹರು ಇದಕ್ಕೆ ಒಪ್ಪಲಿಲ್ಲ.
“ನಮ್ಮ ದೇಶ ಏಳ್ಗ ಕಾಣಬೇಕಾದರೆ ನಮ್ಮ ದೇಶದವರಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ಶಿಸ್ತು ಈ ಮೂರೂ ಗುಣಗಳನ್ನು ಹೊಂದಿರಬೇಕು” ಎಂಬುದು ಜನರಲ್ ಕಾರ್ಯಪ್ಪನವರ ಸುಭಾಷಿತ.
೧೯೬೫ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿತ್ತು. ಜನರಲ್ ಕಾರ್ಯಪ್ಪನವರ ಮಗ ಕೋಡಂದೇರ ನಂದಾ ಕಾರ್ಯಪ್ಪ ಭಾರತೀಯ ವಾಯುಸೇನೆಯಲ್ಲಿದ್ದರು. ಅವರು ಹಾರಿಸುತ್ತಿದ್ದ ಯುದ್ಧವಿಮಾನವನ್ನು ಪಾಕಿಸ್ತಾನದ ಪಡೆಯು ಕೆಳಗಿಳಿಸಿ ನಂದಾ ಅವರನ್ನು ಸೆರೆ ಹಿಡಿಯಿತು. ಸೆರೆ ಹಿಡಿಯಲಾದ ಭಾರತೀಯ ಸೈನಿಕರ (ಪಿಒಡಬ್ಲು) ಪೈಕಿ ಜನರಲ್ ಕಾರ್ಯಪ್ಪನವರ ಮಗ ಸಹ ಇದ್ದಾರೆ ಎಂಬ ವಿಚಾರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಯೂಬ್ ಖಾನ್‌ರಿಗೆ ಗೊತ್ತಾದಾಗ, ತಮ್ಮ ಮಾಜಿ ಸಹೋದ್ಯೋಗಿ ಜನರಲ್ ಕಾರ್ಯಪ್ಪನವರಿಗೆ ಕರೆ ಮಾಡಿ, “ನಿಮ್ಮ ಮಗನನ್ನು ಬಿಡುಗಡೆ ಮಾಡಲಿದ್ದೇವೆ” ಎಂದರು. ಅದಕ್ಕೆ ಉತ್ತರವಾಗಿ ಜನರಲ್ ಕಾರ್ಯಪ್ಪನವರು, “ನಿಮ್ಮಲ್ಲಿರುವ ಎಲ್ಲಾ ಪಿಒಡಬ್ಲೂಗಳು ಸಹ ನನ್ನ ಮಕ್ಕಳೇ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಆತ ನಮ್ಮ ದೇಶದ ಮಗ. ತನ್ನ ತಾಯ್ನಾಡಿಗಾಗಿ ಯುದ್ಧ ಮಾಡುತ್ತಿದ್ದಾನೆ. ನಿಮ್ಮ ಪ್ರಸ್ತಾಪಕ್ಕೆ ಹೃತ್ಪೂರ್ವಕ ಧನ್ಯವಾದಗಳು, ಆದರೆ ನನ್ನದೊಂದು ವಿನಂತಿ: ಎಲ್ಲರನ್ನೂ ಬಿಡುಗಡೆಗೊಳಿಸಿ, ಅಥವಾ ಯಾರನ್ನೂ ಬಿಡುಗಡೆಗೊಳಿಸಬೇಡಿ. ನನ್ನ ಮಗನಿಗೆ ಯಾವುದೇ ವಿಶೇಷ ಸವಲತ್ತು ನೀಡಬೇಡಿ” ಎಂದು ಹೇಳಿ ಪ್ರಾಮಾಣಿಕತೆ ಮೆರೆದರು.
ಜನರಲ್ ಕಾರ್ಯಪ್ಪನವರೊಂದಿಗೆ ಡಾ. ರಾಜಕುಮಾರ್. ಚಿತ್ರ ಕೃಪೆ: ಸಿನೆಲೋಕ
ಜನರಲ್ ಕಾರ್ಯಪ್ಪನವರು ಜನರಲ್ ತಿಮ್ಮಯನವರೊಂದಿಗೆ ಸೇರಿ “ಭಾರತೀಯ ಭೂತಪೂರ್ವ ಸೈನಿಕರ ಸಂಘ” ೧೯೬೪ರಲ್ಲಿ ಸ್ಥಾಪಿಸಿದರು. “ರಕ್ಷಣಾ ಬಲಗಳ ಸ್ಥೈರ್ಯ ಉಳಿದು ಬೆಳೆಯಲು ನಿವೃತ್ತ ಯೋಧರ ಯೋಗಕ್ಷೇಮವನ್ನು ಮರೆಯದಿರಿ. ದೇಶಕ್ಕಾಗಿ ತಾನು ಪ್ರಾಣತ್ಯಾಗ ಮಾಡಿದರೆ, ತನ್ನ ಸಂಸಾರವನ್ನು ದೇಶ ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ಬಳಿಕ ತನ್ನನ್ನು ಸರ್ಕಾರ ಕಡೆಗಣಿಸುವುದಿಲ್ಲ ಎಂಬ ನಂಬಿಕೆ ಯೋಧರ ಸ್ಥೈರ್ಯವನ್ನು ಹೆಚ್ಚುತ್ತದೆ” ಎಂದರು.
೧೯೭೧ರ ಯುದ್ಧದಲ್ಲಿ ಜನರಲ್ ಕಾರ್ಯಪ್ಪನವರು ಗಡಿಯ ಬಳಿ ಹೋಗಿ ಭಾರತೀಯ ಸೈನಿಕರೊಂದಿಗೆ ಮಾತನಾಡಿ ಅವರಲ್ಲಿ ಸ್ಫೂರ್ತಿ ತುಂಬುತ್ತಿದ್ದರು.
ಜನರಲ್ ಕಾರ್ಯಪ್ಪನವರು ೧೫ ಮೇ ೧೯೯೩ ರಂದು ಬೆಂಗಳೂರಿನಲ್ಲಿ ನಿಧನರಾದರು. ಮಗ ನಂದಾ ಕಾರ್ಯಪ್ಪನವರು ಮಡಿಕೇರಿಯಲ್ಲಿ ಅಂತಿಮ ವಿಧಿವಿಧಾ ನಡೆಸಿದಾಗ, ಬಾರತೀಯ ಸೇನೆಯ ಮೂವರು ಮುಖ್ಯಸ್ಥರೂ ಉಪಸ್ಥಿತರಿದ್ದರು.
ಕೃಪೆ:
ಲೇಖನ: ಚಿದಾನಂದ ಗೌಡ, “ಕಸ್ತೂರಿ” ಕನ್ನಡ ಮಾಸಪತ್ರಿಕೆ, ಹುಬ್ಬಳ್ಳಿ, ಅಕ್ಟೋಬರ್ ೨೦೧೮
ವೀಡಿಯೊ: ಯುಟ್ಯೂಬ್
