
ಕರೋನ ಲಾಕ್’ಡೌನ್’ನಿಂದ ಜನರಷ್ಟೆ ಅಲ್ಲ, ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಜನರು ಮನೆ ಬಿಟ್ಟು ಹೊರಬಾರದೆ ಇರುವುದರಿಂದ ಬೀದಿ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವು ನೀಗಿಸಿಕೊಳ್ಳಲು ಈ ಮೂಖ ಪ್ರಾಣಿಗಳು ಕಷ್ಟಪಡುತ್ತಿವೆ. ಆದರೆ ಲಾಕ್’ಡೌನ್ ನಡುವೆಯು ಶಿವಮೊಗ್ಗದ ಪ್ರಾಣಿ ಪ್ರಿಯರ ತಂಡವೊಂದು ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿದೆ.
ನಗರದ ವಿವಿಧೆಡೆ ಸಂಚರಿಸುವ ಈ ತಂಡ ಬೀದಿ ನಾಯಿಗಳಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. 75ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಈ ತಂಡ ಪ್ರತಿದಿನ ಆಹಾರ ನೀಡುತ್ತಿದೆ.
ಲಾಕ್’ಡೌನ್ ಘೋಷಣೆಯಾಗುತ್ತಿದ್ದಂತೆ ಜನರು ತಮ್ಮ ಮನೆಗೆ ದಿನಸಿ, ತರಕಾರಿ ಎಂದು ಅಂಗಡಿ ಮುಂದೆ ಕ್ಯೂ ನಿಂತರು. ಆದರೆ ನಗರದ ಹರ್ಷ ಮತ್ತು ಅವರ ಪತ್ನಿ ಬೀದಿ ನಾಯಿಗಳ ಹಸಿವಿನ ಕುರಿತು ಯೋಚಿಸಿ, ಆಹಾರ ಪೂರೈಸಲು ಆರಂಭಿಸಿದರು.

ಪ್ರತಿದಿನ ಬೆಳಗ್ಗೆ ಆಹಾರ ಸಿದ್ಧಪಡಿಸಿ ತಾವೇ ಹೋಗಿ ಅವುಗಳಿಗೆ ಆಹಾರ ಕೊಟ್ಟು ಬರುತ್ತಿದ್ದಾರೆ. ಆರಂಭದಲ್ಲಿ ಸುಮಾರು 35 ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಈಗ ಇವರ ತಂಡ ದೊಡ್ಡದಾಗಿದೆ. ಕೆನಿತ್ ಹರ್ಷ ಅವರ ಜೊತೆಗೆ ನೈನಾ, ಬಿಂದೂ ರಾಣಿ, ನಿಖಿಲ್ ರೇನುನಾತನ್, ಸಬೀಹ ಶಿರ್ಕೋಲ್, ಮಂಜು ದೊಡ್ಮನೆ, ಸಂಹಿತಾ ಹೀಗೆ ಏಳು ಮಂದಿ ಪ್ರಾಣಿಪ್ರಿಯರು ಒಗ್ಗೂಡಿದ್ದಾರೆ.
ಏಳು ಪ್ರಾಣಿಪ್ರಿಯರು ಎರಡು ಟೀಂ ಮಾಡಿಕೊಂಡು, ನಗರದ ವಿವಿಧೆಡೆಗೆ ತೆರಳಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಇವರ ಕೆಲಸ ಆರಂಭವಾಗಲಿದೆ. ಆಲ್ಕೊಳ, ಆಟೋ ಕಾಂಪ್ಲೆಕ್ಸ್, ವಿನೋಬನಗರ, ಗೋಪಾಲಗೌಡ ಬಡಾವಣೆ, ಜೆ.ಹೆಚ್.ಪಾಟೇಲ್ ಬಡಾವಣೆ, ಸೋಮಿನಕೊಪ್ಪ ಸುತ್ತಮುತ್ತಲು ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಲಾಕ್’ಡೌನ್ ರಿಲೀಫ್ ಅವಧಿ ಮುಗಿಯುವುದರಲ್ಲಿ ಈ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾರೆ. ಈ ತಂಡದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆಯು ಲಭಿಸಿದೆ.
ಬೀದಿ ನಾಯಿಗಳಿಗೆ ಅನ್ನ, ಮೊಸರು, ಡಾಗ್ ಫುಡ್ ಕೊಡುತ್ತಿದ್ದಾರೆ. ಮೂರು ಕೆ.ಜಿ.ಯಷ್ಟು ಅಕ್ಕಿಯನ್ನು ಅನ್ನ ಮಾಡಿ, ಮೊಸರು ಹಾಕಿ ಕಲಿಸುತ್ತಾರೆ. ಇನ್ನು ಇಡೀ ದಿನ ನಾಯಿಗಳಿಗೆ ನೀರು ಸಿಗುವುದು ಕಷ್ಟ. ಹಾಗಾಗಿ ಹಿಂದಿನ ರಾತ್ರಿಯೆ, ಅರ್ಧ ಕೆ.ಜಿ.ಯಷ್ಟು ಡಾಗ್ ಫುಡ್ ನೆನಸಿ, ಬೆಳಗ್ಗೆ ಅದನ್ನು ಮೊಸರು, ಅನ್ನಕ್ಕೆ ಮಿಕ್ಸ್ ಮಾಡುತ್ತಿದ್ದಾರೆ. ಡಾಗ್ ಫುಡ್ ನೀಡುವುದರಿಂದ ನಾಯಿಗಳಿಗೆ ಬಾಯಾರಿಕೆಯು ನೀಗಲಿದೆ.
ನಾಯಿಗಳಿಗೆ ಪ್ರತ್ಯೇಕ ಪ್ಲೇಟ್ ಅಥವಾ ಅಡಕೆ ಹಾಳೆಯಲ್ಲಿ ಊಟ ಕೊಡುತ್ತಾರೆ. ಅವುಗಳು ಊಟ ಮುಗಿಸಿದ ಮೇಲೆ ಪ್ಲೇಟನ್ನು ತೊಳೆದು, ಮತ್ತೊಂದು ಜಾಗಕ್ಕೆ ತೆರಳುತ್ತಾರೆ. ಎಲ್ಲೆಂದರಲ್ಲಿ ಪ್ಲೇಟ್ ಬಿಸಾಡಿದರೆ ಪರಿಸರ ಹಾಳಾಗಲಿದೆ ಅನ್ನುತ್ತಾರೆ ತಂಡದ ಸದಸ್ಯರು. ಇನ್ನು, ಈ ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಾರ್ವಜನಿಕರು ಡೊನೇಷನ್ ನೀಡಲು ಮುಂದಾಗಿದ್ದಾರೆ. ಆದರೆ ಹಣದ ರೂಪದ ಡೊನೇಷನ್ ಬೇಡ. ಬದಲಾಗಿ ಅಕ್ಕಿ, ಮೊಸರು, ಡಾಗ್ ಫುಡ್ ಕೊಡುವುದಿದ್ದರೆ ಸ್ವೀಕರಿಸುತ್ತೇವೆ ಅಂತಾರೆ ತಂಡ ನಿಖಿಲ್.
ಈ ಪ್ರಾಣಿ ಪ್ರಿಯರನ್ನು ಸಂಪರ್ಕಿಸಲು ಈ ನಂಬರ್’ಗೆ ಫೋನ್ ಮಾಡಿ 9886212111
inf: smg live
