ಬಜೆಟ್ ಮಂಡನೆಗೆ ಮುಂಚೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟದ ನಾಯಕತ್ವವು ಚಾಲ್ತಿಗೊಳಿಸಿದೆ.
ಪಕ್ಷವು ವಿಪ್ ನೀಡಿದ್ದರೂ, ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ಮತ್ತು ಎನ್ ಬಿ ನಾಗೇಂದ್ರ – ಈ ನಾಲ್ವರು ಶಾಸಕರು ಸಿಎಲ್‌ಪಿ ಸಭೆ ಹಾಗೂ ಬಜೆಟ್ ಮಂಡನೆಯ ಅಧಿವೇಶನಕ್ಕೂ ಹಾಜರಾಗಲಿಲ್ಲ.
ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ವಿಧಾನ ಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಈ ನಾಲ್ವರು ಶಾಸಕರನ್ನು ವಿಧಾನ ಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಹಲವು ವಾರಗಳಿಂದಲೂ ಕರ್ನಾಟಕದ ಮೈತ್ರಿ ಸರ್ಕಾರದ ಅಂಗವಾದ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯತೆಯು ತಲೆಯೆತ್ತುತ್ತಿತ್ತು. ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ “ಆಪರೇಷನ್ ಕಮಲ” ವಿವಾದ ಸೃಷ್ಟಿ ಮಾಡಿದೆ; ಕಾಕತಾಳೀಯವೆಂಬಂತೆ ಈ ನಾಲ್ವರು ಶಾಸಕರ ವಿರುದ್ಧ ಅನರ್ಹತಾ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ.
ಬಜೆಟ್ ಅಧಿವೇಶನವು ಕಳೆದ ಬುಧವಾರ ಆರಂಭಗೊಂಡಿತು.
