ವಿದೇಶಕ್ಕೆ ಪರಾರಿಯಾಗಿರುವ ೧೧ ಜನ ಅಪರಾಧಿಗಳು ಹಾಗೂ ೧೦೧ ಭಯೋತ್ಪಾದಕರನ್ನು ನರೇಂದ್ರ ಮೋದಿ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿಕೊಂಡಿದೆ.
ನರೇಂದ್ರ ಮೋದಿ ಸರ್ಕಾರವು ಹಲವಾರು ಕ್ಷೇತ್ರಗಳಲ್ಲಿ ಮಹತ್ತರವಾದ ಕೆಲಸವನ್ನು ಮಾಡಿದೆ. ಆದಾಗ್ಯೂ ಇಂತಹ ಕೆಲಸ-ಸಾಧನೆಗಳ ಬಗ್ಗೆ ದೇಶದ ಜನತೆಗೆ ಸರಿಯಾದ ಮಾಹಿತಿ ತಲುಪಿಲ್ಲ.
ಇದಕ್ಕೆ ಎರಡು ಕಾರಣಗಳಿವೆ:
- ಭಾಜಪದ ಸಾಮಾಜಿಕ ಮಾಧ್ಯಮ ಅಭಿಯಾನವು ಚುರುಕಾಗಿಲ್ಲದಿರುವುದು ಕಂಡುಬಂದಿದೆ. ಇದು “ನರೇಂದ್ರ ಮೋದಿ’ ಎಂಬ ಬ್ರ್ಯಾಂಡನ್ನು ಅತಿಯಾಗಿ ಅವಲಂಬಿಸಿದೆ. ಹಲವು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳಲ್ಲಿ ಉತ್ತಮ ಬದಲಾವಣೆ ಉಂಟಾಗಿರುವುದು ಪ್ರಧಾನ ಮಂತ್ರಿಗಳ ಹಲವು ಯೋಜನೆಗಳು ಭೂಮಟ್ಟದ ತನಕ ತಲುಪಿರುವುದಕ್ಕೆ ಸಾಕ್ಷಿಯಾಗಿದೆ. ಆದರೂ ಸಹ, ಜನಜೀವನದಲ್ಲಿ ಬದಲಾವಣೆ ತರದಿರುವಂತಹ ಕೆಲವು ವಿಷಯಗಳಿವೆ. ಅವನ್ನು ಜನತೆಗೆ ಅಗತ್ಯವಾಗಿ ತಿಳಿಸಬೇಕಿದೆ. ಇಲ್ಲದಿದ್ದಲ್ಲಿ ಸರ್ಕಾರ ಈ ವಿಷಯಗಳಲ್ಲಿ ಏನೂ ಮಾಡಿಲ್ಲ ಎಂದು ಜನತೆಯು ತಪ್ಪು ಅಭಿಪ್ರಾಯ ಕಲ್ಪಿಸಿಕೊಂಡು ಸುಳ್ಳು ಮಾಹಿತಿಗೆ ಮರುಳಾಗುತ್ತದೆ.
- ಮುದ್ರಣ ಹಾಗೂ ಪ್ರಸರಣ ಮಾಧ್ಯಮಗಳೂ ಸಹ ಮೋದಿ ಸರ್ಕಾರದ ಸಾಫಲ್ಯಗಳನ್ನು ಎತ್ತಿ ತೋರಿಸಿಲ್ಲ. ಇದು ಅಚ್ಚರಿಯ ಸಂಗತಿಯೇನಲ್ಲ ಏಕೆಂದರೆ ಮಾಧ್ಯಮದಲ್ಲಿರುವ ಅನೇಕರಿಗೆ ಮೋದಿ ಹಾಗೂ ಅವರ ಸರ್ಕಾರದ ವಿರುದ್ಧ ತಮ್ಮದೇ ಆದ ದೃಢ ಪೂರ್ವಾಗ್ರಹಗಳಿವೆ.
ಮೇಲೆ ತಿಳಿಸಲಾದ ಅಂಶಗಳಿಂದ, ಹಲವಾರು ವಿಷಯಗಳ ಬಗ್ಗೆ ಜನತೆಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ತಲೆಮರೆಸಿಕೊಂಡು ಭಾರತದ ಗಡಿಯಾಚೆಗೆ ಹೋದ ಪರಾರಿಯಾದವರು ಹಾಗೂ ಭಯೋತ್ಪಾದಕರ ವಿರುದ್ಧ ಮೋದಿ ಸರ್ಕಾರ ಕೈಗೊಂಡ ಕ್ರಮವೂ ಒಂದು.
ಪರಾರಿಯಾದವರನ್ನು ಸ್ವದೇಶಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಮೋದಿ ಸರ್ಕಾರದ ಪ್ರಮುಖ ಯಶಸ್ಸುಗಳನ್ನು ಇಲ್ಲಿ ಚರ್ಚಿಸೋಣ:
- ಇಸವಿ ೨೦೧೫ರಲ್ಲಿ, ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂನ ನಿಕಟ ಸಹಚರನಾಗಿದ್ದ ಛೋಟಾ ರಾಜನ್‌ನನ್ನು ಇಂಡೋನೇಷ್ಯಾದ ಬಾಲಿಯಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು. ರಾಜನ್ ಸುಮಾರು ೨೦ ವರ್ಷಗಳಿಗಿಂತಲೂ ಹೆಚ್ಚಿನ ಕಾಲ ತಲೆಮರೆಸಿಕೊಂಡಿದ್ದ. ಇವನ ವಿರುದ್ಧ ಕೊಲೆ, ಸುಲಿಗೆ ಹಾಗೂ ಕಾನೂನುಬಾಹಿರ ಮಾದಕ ವಸ್ತು ಮಾರಾಟ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ.
- ಆಗಸ್ಟಾವೆಸ್ಟ್ಲೆಂಡ್ ಹಗರಣದಲ್ಲಿ ಭಾಗಿಯಾಗಿರುವ ಕ್ರಿಸ್ಟಿಯನ್ ಮಿಚೆಲ್ ಬ್ರಿಟಿಷ್ ನಾಗರಿಕ. ಇಸವಿ ೨೦೧೮ರ ನವೆಂಬರ್ ತಿಂಗಳಲ್ಲಿ ಮೋದಿ ಸರ್ಕಾರ ಕ್ರಿಸ್ಟಿಯನ್ ಮಿಚೆಲ್‌ನನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಸಫಲವಾಯಿತು. ಆತ ಕಾಂಗ್ರೆಸ್ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ. ಕೇಂದ್ರೀಯ ತನಿಖಾ ಆಯೋಗ (ಸಿಬಿಐ) ದೊಂದಿಗೆ ಕ್ರಿಸ್ಟಿಯನ್ ಮಿಚೆಲ್ ಹಂಚುವ ಮಾಹಿತಿಯು ಕಾಂಗ್ರೆಸ್ ಪಕ್ಷದ ಉನ್ನದ ಪದಾಧಿಕಾರಿಗಳಿಗೆ ಮುಳುವಾಗಬಹುದು.
- ಕೆಲ ವರ್ಷಗಳ ಹಿಂದೆ ವಿಜಯ್ ಮಲ್ಯ ಭಾರತೀಯ ಅಧಿಕಾರಿಗಳಿಂದ ಹೇಗೆ ತಪ್ಪಿಸಿಕೊಂಡು ವಿದೇಶಕ್ಕೆ ಹೋದರು ಎಂಬುದು ಎಲ್ಲರಿಗೂ ಗೊತ್ತಿದೆ. ಮಲ್ಯ ತಪ್ಪಿಸಿಕೊಂಡು ವಿದೇಶಕ್ಕೆ ಹೋಗಲು ಬಿಟ್ಟಿದ್ದಕ್ಕೆ ಹಾಗೂ ಕಿಂಗ್ಫಿಷರ್ ಏರ್ಲೈನ್ ಹಗರಣಕ್ಕೆ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಇಡೀ ಮಾಧ್ಯಮ ಕ್ಷೇತ್ರವು ಲಂಗುಲಗಾಮಿಲ್ಲದೆ ದೂಷಿಸಿತು. ಆದರೂ, ಹಿಂದಿನ ಯುಪಿಎ ಸರ್ಕಾರವು ಆಡಳಿತದಲ್ಲಿದ್ದಾಗ ಮಲ್ಯರಿಗೆ ಬೇಕಾಬಿಟ್ಟಿ ಸಾಲಗಳು ದೊರೆತಿದ್ದವು. ಮಲ್ಯ ಈ ಸಾಲಗಳನ್ನು ಮರುಪಾವತಿಸದೇ ಬಾಕಿದಾರರಾಗಿ ದೇಶದಿಂದ ತಪ್ಪಿಸಿಕೊಂಡು ಹೋದದ್ದು ನಿಜಾಂಶ. ಕೆಲ ವಾರಗಳ ಹಿಂದೆ, ವಿಜಯ್ ಮಲ್ಯರನ್ನು ಹಸ್ತಾಂತರಿಸಬೇಕೆಂಬ ಮನವಿಯನ್ನು ಬ್ರಿಟಿಷ್ ನ್ಯಾಯಾಲಯವು ಎತ್ತಿ ಹಿಡಿದದ್ದು ನರೇಂದ್ರ ಮೋದಿ ಸರ್ಕಾರಕ್ಕೆ ಸಂದ ಬೃಹತ್ ಗೆಲುವು. ಇದು ಮೋದಿ ಸರ್ಕಾರದ ರಾಜತಾಂತ್ರಿಕ ಪರಾಕ್ರಮವನ್ನು ಎತ್ತಿ ತೋರಿಸುತ್ತದೆ; ಜೊತೆಗೆ ಮೋದಿ ಸರ್ಕಾರದ ಬದ್ಧತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಬೆಳಕು ಚೆಲ್ಲುತ್ತದೆ.
ಮೇಲೆ ಹೇಳಿದಂತೆ, ಅಪರಾಧಿಗಳನ್ನು ಸೆರೆ ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸುವಲ್ಲಿ ಸರ್ಕಾರದ ತೀವ್ರ ರಾಜತಾಂತ್ರಿಕ ಕೆಲಸದ ಬಗ್ಗೆ ಜನರಿಗೆ ನಿಖರವಾಗಿ ತಿಳಿದಿಲ್ಲ.
ಭಾರತವನ್ನು ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೋದಿ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಎರಡು ಉದಾಹರಣೆಗಳಿವೆ:
- ಅಕ್ಟೋಬರ್ 2018 ರಲ್ಲಿ ಮೊಹಮ್ಮದ್ ಯಾಹ್ಯಾನನ್ನು ಬಂಧಿಸಿ, ಬಹರೇನ್‌ನಿಂದ ಭಾರತಕ್ಕೆ ಕರೆತರಲಾಯಿತು. ದೇಶದಿಂದ ಪರಾರಿಯಾಗಿದ್ದ ಆರ್ಥಿಕ ಅಪರಾಧಿಯೊಬ್ಬನನ್ನು ಹಸ್ತಾಂತರಿಸಿಕೊಂಡದ್ದು ಇದೇ ಮೊದಲು. ಇಸವಿ ೨೦೦೩ರಲ್ಲಿ ಯಾಹ್ಯಾ ಹಲವು ಬ್ಯಾಂಕ್‌ಗಳಿಗೆ ಒಟ್ಟು ಸುಮಾರು ೪೬ ಲಕ್ಷ ರೂಪಾಯಿಗಳಷ್ಟು ವಂಚಿಸಿ, ಭಾರತದಿಂದ ಪರಾರಿಯಾಗಿದ್ದ.
- ಕೈಗಾರಿಕಾ ಉದ್ಯಮಿ ವಿನಯ್ ಮಿತ್ತಲ್ ಬ್ಯಾಂಕ್‌ಗಳಿಗೆ ಸುಮಾರು ೪೦ ಕೋಟಿ ರೂಪಾಯಿಗಳ ವಂಚನೆ ಮಾಡಿದ್ದರು. ಇಂಡೊನೇಷ್ಯಾದಲ್ಲಿದ್ದ ಮಿತ್ತಲ್‌ರನ್ನು ಮೋದಿ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ವಿದೇಶಗಳಿಂದ ಅಪರಾಧಿಗಳನ್ನು ಭಾರತಕ್ಕೆ ವಾಪಸ್ ಕರೆಸಿಕೊಳುವುದು ಸಾಮಾಜಿಕ ಮಾಧ್ಯಮಗಳಲ್ಲಿ ಮನಬಂದಂತೆ ಬರೆಯುವಷ್ಟು-ಹೇಳುವಷ್ಟು ಸುಲಭವಲ್ಲ. ಹಸ್ತಾಂತರ ಪ್ರಕ್ರಿಯೆ ಸುಲಭಗೊಳಿಸಲು ಒಪ್ಪಂದಗಳಿಗೆ ಸಹಿ ಮಾಡಬೇಕಾಗಿದೆ. ಭಾರತವು ೫೦ ರಾಷ್ಟ್ರಗಳೊಂದಿಗೆ ಇಂತಹ ಒಪ್ಪಂದಕ್ಕೆ ಸಹಿ ಹಾಕಿದೆ ಹಾಗೂ ಹೆಚ್ಚುವರಿ ಹತ್ತು ದೇಶಗಳೊಂದಿಗೆ ಹಸ್ತಾಂತರಣ ವ್ಯವಸ್ಥೆ ಕಲ್ಪಿಸಿಕೊಂಡಿದೆ. ಇದರ ಫಲವಾಗಿ, ಮೋದಿ ಸರ್ಕಾರವು ಇತ್ತೀಚಿನ ಮೂರು ವರ್ಷಗಳಲ್ಲಿ ಒಟ್ಟು ೧೧ ಜನ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸಿಕೊಂಡಿದೆ!
ನಮ್ಮ ದೇಶವನ್ನು ಸುಭದ್ರಗೊಳಿಸಲು ನರೇಂದ್ರ ಮೋದಿ ಸರಕಾರವು ಹಾಕಿದ ಪರಿಶ್ರಮವನ್ನು ಪ್ರತಿಯೊಬ್ಬ ಭಾರತೀಯನೂ ಶ್ಲಾಘಿಸುವಂತಹ ಅದ್ಭುತ ಮಾಹಿತಿಯನ್ನು ಸ್ಟ್ರಾಟೆಜಿಕ್ ನ್ಯೂಸ್ ಇಂಟರ್ನ್ಯಾಷನಲ್ ತೆರೆದಿಟ್ಟಿದೆ. ಇಸವಿ ೨೦೧೪ರಿಂದ ಇಂದಿನವರಗೆ, ಸುಮಾರು ೧೦೧ ಭಯೋತ್ಪಾದಕರು ನಾನಾ ದೇಶಗಳ ಸರ್ಕಾರಗಳಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದಾರೆ! ಇವರ ಪೈಕಿ ಯುಎಇಯಿಂದ ೩೨ ಮಂದಿ ಹಸ್ತಾಂತರಗೊಂಡರು. ಭಯೋತ್ಪಾದನಾ ಸಂಘಟನೆ ಐಸಿಸ್ ಭಾರತದಲ್ಲಿ ನೆಲೆಯೂರಲು ಹವಣಿಸುತ್ತಿದೆ. ಆದರೆ, ಹಸ್ತಾಂತರಗೊಂಡ ೧೦೧ ಭಯೋತ್ಪಾದಕರಲ್ಲಿ ೪೭ ಜನರು ಐಸಿಸ್ ಸದಸ್ಯರು ಎಂಬುದು ನರೇಂದ್ರ ಮೋದಿ ಸರ್ಕಾರವು ಐಸಿಸ್ ವಿಚಾರದಲ್ಲಿ ಜಾಗ್ರತವಾಗಿ ತನ್ನ ಕೆಲಸ ಮಾಡಿರುವುದಕ್ಕೆ ಸಾಕ್ಷಿ. ಉಳಿದ ಬಂಧಿತ ಭಯೋತ್ಪಾದಕರು ಲಷ್ಕರೆ ತಯ್ಯಬಾ, ಇಂಡಿಯನ್ ಮುಜಾಜಿದ್ದೀನ್, ಎನ್‌ಎಸ್‌ಸಿಎನ್ ಸಂಘಟನೆಯ ಸದಸ್ಯರಾಗಿದ್ದರು.
ಸರ್ಕಾರದ ಈ ಸಾಧನೆಗಳು, ನರೇಂದ್ರ ಮೋದಿಯವರು ಆಗಾಗ್ಗೆ ವಿದೇಶಕ್ಕೆ ಹೋಗುತ್ತಾರೆ ಎಂದು ಗೇಲಿ ಮಾಡುವವರ ಕಪಾಳಕ್ಕೆ ಜೋರಾಗಿ ಹೊಡೆದುರುಳಿಸುವಂತಿವೆ. ಭಾರತವು ಹಲವು ರಾಷ್ಟ್ರಗಳು – ಅದರಲ್ಲೂ ವಿಶಿಷ್ಟವಾಗಿ ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರಗಳೊಂದಿಗೆ – ಬಾಂಧವ್ಯವನ್ನು ಉತ್ತಮಗೊಳಿಸಿಕೊಂಡಿದೆ. ಆಯಾ ದೇಶಗಳಲ್ಲಿ ನೆಲೆಸಿರುವಂತಹ ಭಯೋತ್ಪಾದಕರ ವಿರುದ್ಧ ಸಮರದಲ್ಲಿ ಈ ರಾಷ್ಟ್ರಗಳು ಭಾರತಕ್ಕೆ ಎಲ್ಲಾ ಅಗತ್ಯ ನೆರವುಗಳನ್ನೂ ನೀಡುತ್ತಿವೆ. ಭಾರತಕ್ಕೆ ಮೋಸ ಮಾಡಿದ ಅಥವಾ ದೇಶದ ವಿರುದ್ಧ ಸಶಸ್ತ್ರಾಸ್ತ್ರ ಸಮರ ಸಾರಿದ ಅಪರಾಧಿಗಳಲ್ಲಿ ಈಗ ಭಯ ಹುಟ್ಟಿದೆ.
