ಕೊಡಗು ಜಿಲ್ಲೆಯವರಿಗೆ ಮಾತ್ರವಲ್ಲ, ಈಗ ಚಿಕ್ಕಮಗಳೂರು ಮತ್ತು ಪಕ್ಕದಲ್ಲಿರುವ ಶಿವಮೊಗ್ಗ ಜಿಲ್ಲೆಯ ಜನರಿಗೆ ರೈಲು ಯೋಜನಾ ರಗಳೆ ಎದುರಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ “ಶೃಂಗೇರಿ ರೈಲು ವಿಸ್ತರಣಾ ಯೋಜನೆ”ಯ ವಿರುದ್ಧ ಪ್ರತಿಭಟಿಸಲು ಸಜ್ಜಾಗಿದ್ದಾರೆ. ಈ ರೈಲು ಮಾರ್ಗ ಯೋಜನೆಯು ಇವರಡೂ ಜಿಲ್ಲೆಗಳ ದಟ್ಟ ಕಾಡಿನ ಮೂಲಕ ಹಾದುಹೋಗುವಂತೆ ರೂಪಿಸಲಾಗಿದೆ.
ಭಾರತೀಯ ಜನತಾ ಪಕ್ಷವು ತಾನು ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿ, ಪರಿಸರ ಕೆಡಿಸದೇ ಈ ಯೋಜನೆಯನ್ನು ನಡೆಸುವ ಭರವಸೆ ಕೊಟ್ಟಿತ್ತು ಎಂದು ಹೇಳಿಕೊಂಡಿದೆ.
ಶಿವಮೊಗ್ಗದ ತನಕವಿರುವ ರೈಲು ಮಾರ್ಗವನ್ನು ಶೃಂಗೇರಿಯ ತನಕ ವಿಸ್ತರಿಸಿರೆಂದು ಕುಮಾರಸ್ವಾಮಿಯವರು ಕೇಂದ್ರೀಯ ರೈಲು ಮಂತ್ರಿ ಪಿಯುಷ್ ಗೋಯಲ್‌ರಿಗೆ ಮನವಿ ಮಾಡಿದ್ದರು. ಈ ವಿಸ್ತರಣಾ ಯೋಜನೆಯಿಂದ ಶೃಂಗೇರಿ ಮಠಕ್ಕೆ ಭೇಟಿ ನೀಡುವ ತೀರ್ಥಯಾತ್ರಿಗಳಿಗೆ ಅನುಕೂಲವಾಗುತ್ತದೆ ಎಂಬುದು ಕುಮಾರಸ್ವಾಮಿಯವರ ಲೆಕ್ಕಾಚಾರ. ೨೦೧೭-೧೮ರಲ್ಲಿ ಈ ಸಂಬಂಧ ಸಮೀಕ್ಷಾ ಕೆಲಸಕ್ಕೆ ಅನುಮತಿ ನೀಡಲಾಗಿದ್ದು, ಈ ವರ್ಷ ಆರಂಭಗೊಂಡಿದೆ.
ಈ ಪ್ರಸ್ತಾಪ ಬಗ್ಗೆ ತಿಳಿದುಕೊಂಡ ಸ್ಥಳೀಯರ ಮತ್ತು ಪರಿಸರವಾದಿಗಳ ಪಿತ್ತ ನೆತ್ತಿಗೇರಿದೆ. ಕೊಪ್ಪ, ಶೃಂಗೇರಿ ಮತ್ತು ಕಳಸದ ನಿವಾಸಿಗಳು, “ಮುಖ್ಯಮಂತ್ರಿಗಳು ಪಿಯುಷ್ ಗೋಯಲ್‌ರಿಗೆ ಕಳುಹಿಸಿದ ಮನವಿಯನ್ನು ಹಿಂತೆಗೆದುಕೊಳ್ಳಬೇಕು” ಎಂದು ಅಗ್ರಹಪಡಿಸಿದ್ದಾರೆ. “ಈ ಮೂರೂ ಸ್ಥಳಗಳಲ್ಲಿ ದಟ್ಟ ಕಾಡುಗಳಿವೆ. ಈ ಯೋಜನೆಯು ಈ ವಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹಾಳುಮಾಡುತ್ತದೆ” ಎನ್ನುತ್ತಾರೆ.
“ಶೃಂಗೇರಿ ರೈಲು ಮಾರ್ಗ ವಿಸ್ತರಣಾ ಯೋಜನೆಯ ವಿರುದ್ಧ ಈ ಊರುಗಳ ನಿವಾಸಿಗಳು ತಮ್ಮ ವಿರೋಧವನ್ನು ತೀವ್ರಗೊಳಿಸಲಿದ್ದಾರೆ. ಇಡೀ ಪಶ್ಚಿಮ ಘಟ್ಟವು ಬಹಳ ಸೂಕ್ಷ್ಮ. ಯಾರಾದರೂ ಇಂತಹ ಯೋಜನಯನ್ನು ಪ್ರಸ್ತಾಪಿಸುತ್ತಾರಾ? ಜಿಲ್ಲೆಯ ಎಲ್ಲಾ ಪಟ್ಟಣಗಳೂ ರಸ್ತೆಗಳ ಮೂಲಕ ಉತ್ತಮ ಸಂಪರ್ಕ ಹೊಂದಿರುವಾಗ ರೈಲು ಮಾರ್ಗ ವಿಸ್ತರಣೆ ಪ್ರಸ್ತಾಪಿಸುವ ಪ್ರಮೇಯವೇನಿದೆ?” ಎಂದು ಸಂಯುಕ್ತ ಪರಿಸರ ಸಂರಕ್ಷಣಾ ಅಭಿಯಾನದ ಸದಸ್ಯ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ಸಹದೇವ್ ಶಿವಪುರ ಅವರು ಪ್ರಶ್ನಿಸಿದ್ದಾರೆ.
ಇಡೀ ರಾಜ್ಯಕ್ಕೇ ಕುಡಿಯುವ ನೀರು ಮತ್ತು ನೀರಾವರಿಗಾಗಿ ಜಲಮೂಲವಾದ ಇಡೀ ಪಶ್ಚಿಮ ಘಟ್ಟ ವಲಯವನ್ನೇ ಈ ರೈಲು ಯೋಜನೆ ಹಾಳು ಮಾಡಬಲ್ಲದು ಎಂದು ಸಹದೇವ್ ಎಚ್ಚರಿಕೆ ಕೊಟ್ಟಿದ್ದಾರೆ.
